ಉದಯವಾಹಿನಿ, ನವದೆಹಲಿ: ಇಡೀ ದೇಶದ ಗಮನ ಸೆಳೆದಿರುವ ಮತ್ತು ತೀವ್ರ ರಾಜಕೀಯ ಕಾದಾಟಕ್ಕೆ ಕಾರಣವಾಗಿರುವ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸೋಮವಾರ ನಡೆಯಲಿದೆ. ಈ ವೇಳೆ ಹಿಂಸಾಚಾರ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ನಡೆಸಿದ ಭದ್ರತಾ ಪರಿಶೀಲನೆಯಲ್ಲಿ 11 ಜಿಲ್ಲೆಗಳನ್ನು ಸೂಕ್ಷ್ಮಾತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಅಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.
ಮುರ್ಷಿದಾಬಾದ್, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಕೂಚ್ ಬೆಹಾರ್, ಮಾಲ್ಡಾ, ನಾಡಿಯಾ, ಬೀರ್ಭೂಮ್, ಪಶ್ಚಿಮ ಮೇದಿನಿಪುರ, ಝಾರ್ಗ್ರಾಮ್, ಹೌರಾ ಮತ್ತು ಹೂಗ್ಲಿಯ ಕೈಗಾರಿಕಾ ವಲಯಗಳನ್ನು ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.
ಈ ವಾರದ ಆರಂಭದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF), ಸೇನೆ, ಎನ್ಐಎ, ಗುಪ್ತಚರ ಇಲಾಖೆ (ಐಬಿ) ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಚುನಾವಣಾ ಪ್ರಕ್ರಿಯೆಯ ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಎಲ್ಲಾ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಜನರಲ್ಲಿ ಜಾಗೃತಿ ಅಗತ್ಯ: ಚುನಾವಣಾ ಹಿಂಸಾಚಾರದ ಕುರಿತು ‘ಈಟಿವಿ ಭಾರತ್​​’ ಜೊತೆ ಮಾತನಾಡಿರುವ ಬಿಎಸ್ಎಫ್ ಮಾಜಿ ಮಹಾನಿರ್ದೇಶಕ ಮತ್ತು ಭದ್ರತಾ ತಜ್ಞ ಪ್ರಕಾಶ್ ಸಿಂಗ್ ಅವರು, “ರಾಜ್ಯದಲ್ಲಿ ಚುನಾವಣಾ ಹಿಂಸೆಯನ್ನು ತಡೆಯಲು ಸೇನಾ ನಿಯೋಜಿಸುವ ಮೂಲಕ ತಾತ್ಕಾಲಿಕವಾಗಿ ತಡೆಯಬಹುದು. ಆದರೆ, ಶಾಶ್ವತ ಶಾಂತಿ ಮತ್ತು ಪರಿಹಾರಕ್ಕಾಗಿ ಪೊಲೀಸ್ ಸುಧಾರಣೆ, ನ್ಯಾಯಾಂಗ ಹೊಣೆಗಾರಿಕೆ ಮತ್ತು ಮತದಾರರಲ್ಲಿ ಜಾಗೃತಿ ಅಗತ್ಯವಿದೆ. ಸ್ಥಳೀಯ ಪೊಲೀಸರು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡಿದರೆ ವ್ಯವಸ್ಥೆ ದುರ್ಬಲಗೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚುತ್ತಿರುವ ಸಾವು-ನೋವು: ಕಳೆದ ಮೂರು ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2011ರಲ್ಲಿ 25 ಹಾಗೂ 2016ರಲ್ಲಿ 30 ಸಾವುಗಳು ವರದಿಯಾಗಿದ್ದರೆ, 2021ರ ಚುನಾವಣೆ ಅತ್ಯಂತ ರಕ್ತಸಿಕ್ತವಾಗಿದ್ದು, 58 ಮಂದಿ ಮೇಲೆ ಹಿಂಸಾಚಾರ ನಡೆದು ಸಾವಿಗೀಡಾಗಿದ್ದರು.

ಈ ಬಾರಿ ರಾಜ್ಯಾದ್ಯಂತ ಸುಮಾರು 75 ಸಾವಿರಕ್ಕೂ ಅಧಿಕ ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಸಿಆರ್‌ಪಿಎಫ್​​ ತನ್ನ ಬಳಿ ಇರುವ ಅತ್ಯಾಧುನಿಕ ‘ಮಾರ್ಕ್ಸ್‌ಮನ್’ ಶಸ್ತ್ರಸಜ್ಜಿತ ವಾಹನಗಳನ್ನು ಬಳಸುತ್ತಿದೆ. ಗುಂಡು ಮತ್ತು ಸ್ಫೋಟಗಳನ್ನು ತಡೆಯುವ ಸಾಮರ್ಥ್ಯವಿರುವ ಈ ವಾಹನಗಳು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಗೇಮ್ ಚೇಂಜರ್ ಆಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್ಐಎ ಹದ್ದಿನ ಕಣ್ಣು: ಚುನಾವಣೆ ವೇಳೆ, ರಾಜ್ಯದಲ್ಲಿ 79 ಕಚ್ಚಾ ಬಾಂಬ್‌ಗಳು ಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿದೆ. ಗಡಿಯಾಚೆಗಿನ ಪ್ರಭಾವ ಮತ್ತು ಅಕ್ರಮ ಹಣಕಾಸು ಹರಿವಿನ ಬಗ್ಗೆಯೂ ತನಿಖೆ ನಡೆಯುತ್ತಿದೆ. ಬಾಂಗ್ಲಾದೇಶದ ಗಡಿ ಭಾಗಗಳಲ್ಲಿ ರಾತ್ರಿ ಕಾವಲು ಹೆಚ್ಚಿಸಲಾಗಿದೆ.  ಮತ ಎಣಿಕೆ ಮುಗಿದ ನಂತರವೂ ರಾಜ್ಯದಲ್ಲಿ ಹಿಂಸಾಚಾರ ಸಂಭವಿಸದಂತೆ ತಡೆಯಲು ಭದ್ರತಾ ಪಡೆಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕನಿಷ್ಠ 2 ತಿಂಗಳು ನಿಯೋಜನೆಯಲ್ಲೇ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Leave a Reply

Your email address will not be published. Required fields are marked *

error: Content is protected !!