ಉದಯವಾಹಿನಿ, ಚೆನ್ನೈ (ತಮಿಳುನಾಡು): ಶಾರ್ಜಾದಿಂದ ಆಗಮಿಸಿ ಚೆನ್ನೈ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಇಳಿಯುವಾಗ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರ ತೆರೆದು, ಅದರಿಂದ ಹೊರಗೆ ಜಿಗಿದಿದ್ದಾನೆ. ಈ ಘಟನೆಯು ವಿಮಾನದಲ್ಲಿ ಇತರ ಪ್ರಯಾಣಿಕರ ಜೀವಕ್ಕೆ ಆಪತ್ತು ತರುವ ಅಪಾಯ ಸೃಷ್ಟಿಸಿತ್ತು.
217 ಪ್ರಯಾಣಿಕರನ್ನು ಹೊತ್ತ ಏರ್ ಅರೇಬಿಯಾ ವಿಮಾನವು ಇಂದು ಬೆಳಗಿನಜಾವ ಸುಮಾರು 3:30 ಕ್ಕೆ ಶಾರ್ಜಾದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು. ವಿಮಾನವು ರನ್‌ವೇಯಲ್ಲಿ ಇಳಿದು ಟ್ಯಾಕ್ಸಿವೇಯಲ್ಲಿ ಸಾಗಿ ನಿಗದಿತ ಸ್ಥಳದಲ್ಲಿ ನಿಲ್ಲಲು ಚಲಿಸುತ್ತಿತ್ತು. ಈ ವೇಳೆ, ವಿಮಾನದಲ್ಲಿದ್ದ ಪುದುಕ್ಕೊಟ್ಟೈ ಜಿಲ್ಲೆಯ ಮೊಹಮ್ಮದ್ ನಿಜಾಮುದ್ದೀನ್ ಶೆರಿಫ್ (30) ಎಂಬಾತ ಇದ್ದಕ್ಕಿದ್ದಂತೆ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು, ಕೆಳಗೆ ಹಾರಿ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಇದು ವಿಮಾನದಲ್ಲಿದ್ದ ಇತರೆ ಪ್ರಯಾಣಿಕರನ್ನು ತೀವ್ರ ಆಘಾತಕ್ಕೀಡು ಮಾಡಿತು.

ಘಟನೆಯು ವಿಮಾನ ನಿಲ್ದಾಣದಲ್ಲಿ ಭಾರಿ ಭೀತಿ ಸೃಷ್ಟಿಸಿತು. ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ನಿರ್ಗಮನ ದ್ವಾರ ತೆರೆದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದವನನ್ನು ಬಂಧಿಸಿದರು. ಇದರಿಂದ, ವಿಮಾನವನ್ನು ನಿಗದಿತ ಸಮಯಕ್ಕೆ ಅದರ ಗೊತ್ತುಪಡಿಸಿದ ಪಾರ್ಕಿಂಗ್ ಸ್ಥಳಕ್ಕೆ ತರದೆ ಟ್ಯಾಕ್ಸಿವೇಯಲ್ಲಿ ನಿಲ್ಲಿಸಲಾಯಿತು.

ಈ ಘಟನೆಯಿಂದ ಇದೇ ರನ್​ವೇಯಲ್ಲಿ ಇಳಿಯಬೇಕಿದ್ದ ಲಂಡನ್‌ನಿಂದ ಚೆನ್ನೈಗೆ ಆಗಮಿಸುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವು ಇಳಿಯಲು ಅವಕಾಶ ಇಲ್ಲದ ಕಾರಣ ಅದನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಯಿತು.

 

Leave a Reply

Your email address will not be published. Required fields are marked *

error: Content is protected !!