ಉದಯವಾಹಿನಿ, ಪುಣೆ(ಮಹಾರಾಷ್ಟ್ರ): ಕಿಡಿಗೇಡಿ ವೃದ್ಧನೊಬ್ಬ ನಾಲ್ಕು ವರ್ಷದ ಹೆಣ್ಣು ಮಗುವಿಗೆ ಆಹಾರದ ಭರವಸೆ ನೀಡಿ ಕರೆದೊಯ್ದು ಅತ್ಯಾಚಾರ ಎಸಗಿ ಭೀಕರವಾಗಿ ಕೊಂದು ಹಾಕಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಈ ದುಷ್ಕೃತ್ಯ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪುಣೆಯಲ್ಲಿ ಮುಂಬೈ-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ: ಬಾಲಕಿಯ ಕುಟುಂಬ ಸದಸ್ಯರು ಮತ್ತು ಇತರ ಅಪಾರ ಸಂಖ್ಯೆಯ ಪ್ರತಿಭಟನಾಕಾರರು ನಿನ್ನೆ ಸಂಜೆ ಪುಣೆಯ ನವಲೆ ಸೇತುವೆ ಪ್ರದೇಶದಲ್ಲಿ ಶವವನ್ನು ರಸ್ತೆಯ ಮೇಲಿಟ್ಟು, ಮುಂಬೈ-ಬೆಂಗಳೂರು ಹೆದ್ದಾರಿ ತಡೆದು ಭಾರಿ ಆಕ್ರೋಶ ಹೊರ ಹಾಕಿದರು. ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ 65 ವರ್ಷದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದರು.ಪ್ರತಿಭಟನೆಯಿಂದಾಗಿ ಜನನಿಬಿಡ ರಸ್ತೆಯಲ್ಲಿ ಸುಮಾರು ನಾಲ್ಕು ಗಂಟೆ ಸಂಚಾರ ಅಸ್ತವ್ಯಸ್ತವಾಯಿತು. ಭಾರಿ ಸಂಚಾರ ದಟ್ಟಣೆ ಉಂಟಾದ ಹಲವು ವಿಡಿಯೊಗಳು ಆನ್‌ಲೈನ್‌ನಲ್ಲಿ ಹರಿದಾಡಿವೆ.ಇದಾದ ನಂತರ ಬಿಗಿ ಪೊಲೀಸ್ ಭದ್ರತೆಯ ನಡುವೆ ಮಧ್ಯರಾತ್ರಿಯ ನಂತರ ಇಲ್ಲಿನ ವೈಕುಂಠ ಸ್ಮಶಾನದಲ್ಲಿ ಬಾಲಕಿಯ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.

ಬಾಲಕಿಯ ಕೊಂದು ಸಗಣಿಯಲ್ಲಿ ಶವ ಎಸೆದು ಹೋದ ಪಾಪಿ!: ಕೂಲಿ ಕೆಲಸ ಮಾಡುವ ಮತ್ತು ಕ್ರಿಮಿನಲ್ ದಾಖಲೆ ಹೊಂದಿರುವ ವೃದ್ಧ ದುಷ್ಕರ್ಮಿ, ಪುಣೆಯ ಭೋರ್ ತಹಸಿಲ್‌ನಲ್ಲಿ ಪುಟ್ಟ ಮಗುವಿಗೆ ಆಹಾರದ ಭರವಸೆ ನೀಡಿದ್ದಾನೆ. ನಂತರ ದನಗಳ ಶೆಡ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಂದಿದ್ದಾನೆ. ನಂತರ ಶವವನ್ನು ಸಗಣಿಯಲ್ಲಿ ಎಸೆದು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 7ರ ವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ನಿನ್ನೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ, ಆರೋಪಿಯ ವಿರುದ್ಧ ಕಠಿಣ ಕ್ರಮ ಮತ್ತು ತ್ವರಿತ ವಿಚಾರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಘಟನೆಯನ್ನು ಆಘಾತಕಾರಿ ಮತ್ತು ಮಾನವೀಯತೆಗೆ ಕಳಂಕ ಎಂದು ಬಣ್ಣಿಸಿರುವ ಅವರು, ಸರ್ಕಾರ ಬಾಲಕಿಯ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ನ್ಯಾಯವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಈ ಕುರಿತು ಡಿಸಿಎಂ ಸುನೇತ್ರಾ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೂ ಮಾತನಾಡಿದ್ದು, ಕಠಿಣ ಶಿಕ್ಷೆ ಸಿಗುವಂತೆ ತ್ವರಿತ ನ್ಯಾಯಾಲಯದ ವಿಚಾರಣೆಗೆ ಮನವಿ ಮಾಡಿದ್ದಾರೆ.ಮರಣದಂಡನೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಡಿಸಿಎಂ ಸೂಚನೆ: ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೂ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ, ದುಷ್ಕರ್ಮಿಗೆ ಮರಣದಂಡನೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!