ಉದಯವಾಹಿನಿ, ಪುಣೆ: ಮೂರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ನೂರಾರು ಪ್ರತಿಭಟನಾಕಾರರು ಪುಣೆಯಲ್ಲಿ ಮುಂಬೈ-ಬೆಂಗಳೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಜನಸಂದಣಿಯ ಹೆದ್ದಾರಿಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಿದೆ. 65 ವರ್ಷದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸಂತ್ರಸ್ತ ಬಾಲಕಿಯ ಕುಟುಂಬದ ಸದಸ್ಯರು ಮತ್ತು ಇತರ ಪ್ರತಿಭಟನಾಕಾರರು ನವಲೆ ಸೇತುವೆ ಪ್ರದೇಶದ ಬಳಿಯ ರಸ್ತೆಯಲ್ಲಿ ಆಕೆಯ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು.
ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ಮಾಡಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ವೈರಲ್ ವೀಡಿಯೊಗಳಲ್ಲಿ ಹೆದ್ದಾರಿಯಲ್ಲಿ ದೀರ್ಘವಾಗಿ ಸರತಿ ಸಾಲಿನಲ್ಲಿ ವಾಹನಗಳು ನಿಂತಿರುವುದು ಕಾಣಿಸಿಕೊಂಡಿದೆ.ಮಧ್ಯರಾತ್ರಿಯ ನಂತರ ಭಾರೀ ಪೊಲೀಸ್ ಭದ್ರತೆಯಲ್ಲಿ ಪುಣೆಯ ವೈಕುಂಠ ಸ್ಮಶಾನದಲ್ಲಿ ಬಾಲಕಿಯ ಅಂತ್ಯಕ್ರಿಯೆ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿ ಭೀಮರಾವ್ ಕಾಂಬಳೆ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಕಾಂಬಳೆ ಬಾಲಕಿಯನ್ನು ಪಶುಶಾಲೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆತ ಮಗುವಿನೊಂದಿಗೆ ಇರುವುದು ಕಂಡು ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ನಂತರ ಬಟ್ಟೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
“ಪೊಲೀಸರು ಬಾಲಕಿಯ ತಲೆಯಲ್ಲಿ ಗಾಯಗಳು ಇರುವುದನ್ನು ಕಂಡುಕೊಂಡಿದ್ದಾರೆ. ಈ ಕುರಿತು ತನಿಖೆಗೆ ನಾಲ್ವರು ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಶೀಘ್ರವಾಗಿ ಆರೋಪಪಟ್ಟಿ ಸಲ್ಲಿಸಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
