ಉದಯವಾಹಿನಿ, ಲಕ್ಕೋ: ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯಲ್ಲಿ ರೀಲ್ ಚಿತ್ರೀಕರಣಕ್ಕೆ ತೆರಳಿ ಹಳೆಯ ನೀರಿನ ಟ್ಯಾಂಕ್ ಮೇಲೆ ಸಿಲುಕಿಕೊಂಡಿದ್ದ ಇಬ್ಬರು ಬಾಲಕರನ್ನು 16 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ರಾಜ್ಯದ ಅಧಿಕಾರಿಗಳ ಕೋರಿಕೆಯ ಮೇರೆಗೆ ಕೇಂದ್ರ ವಾಯು ಕಮಾಂಡ್ ನಿಂದ IAF Mi-17 V5 ಹೆಲಿಕಾಪ್ಟರ್ ಅನ್ನು ರಕ್ಷಣೆಗೆ ನಿಯೋಜಿಸಲಾಯಿತು. ಹೆಲಿಕಾಪ್ಟರ್ ಬೆಳಿಗ್ಗೆ 5.20ರ ಸುಮಾರಿಗೆ ಕಾನ್ಶಿರಾಮ್ ಅವಾಸಿಯ್ ಕಾಲೋನಿಗೆ ತಲುಪಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಸಂಕ್ಷಿಪ್ತ ಕಾರ್ಯಾಚರಣೆಯಲ್ಲಿ ಇಬ್ಬರು ಬಾಲಕರನ್ನು ರಕ್ಷಣೆ ಮಾಡಿ ಗೋರಖ್‌ಪುರಕ್ಕೆ ಕರೆದೊಯ್ಯಲಾಯಿತು.
ರಕ್ಷಣಾ ಕಾರ್ಯಚರಣೆ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. ವಿದ್ಯುತ್ ಇಲಾಖೆ, ಪುರಸಭೆ, ಜಿಲ್ಲಾಡಳಿತ ಮತ್ತು NDRF ಅಧಿಕಾರಿಗಳನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಐವರು ಬಾಲಕರು ಸೋಶಿಯಲ್ ಮೀಡಿಯಾ ರೀಲ್ ಚಿತ್ರೀಕರಣಕ್ಕಾಗಿ ಟ್ಯಾಂಕ್ ಮೇಲಕ್ಕೆ ಹತ್ತಿದ್ದು, ಈ ವೇಳೆ ಟ್ಯಾಂಕ್‌ನ ಏಣಿ ಮುರಿದು ಮೂವರು ಕೆಳಗೆ ಬಿದ್ದಿದ್ದಾರೆ. ಅವರಲ್ಲಿ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಪವನ್ ಮತ್ತು ಕಲ್ಲು ಎಂಬ ಇಬ್ಬರು ಬಾಲಕರು ಟ್ಯಾಂಕ್ ಮೇಲೆಯೇ ಸಿಲುಕಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!