ಉದಯವಾಹಿನಿ, ಚೆನ್ನೈ(ತಮಿಳುನಾಡು): ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರಿಗೆ ನೀಡಲಾಗಿದ್ದ ಬೆಂಗಾವಲು ವಾಹನವನ್ನು ತಮಿಳುನಾಡು ಪೊಲೀಸರು ಹಿಂಪಡೆದಿದ್ದಾರೆ. ಹಾಲಿ ಚುನಾವಣೆಯಲ್ಲಿ ಐದು ದಶಕಗಳ ದ್ರಾವಿಡ ಪಕ್ಷಗಳ ಪ್ರಾಬಲ್ಯ ಮೀರಿ ಟಿವಿಕೆ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಇತಿಹಾಸ ಬರೆದಿದೆ. ಅದ್ಭುತ ಫಲಿತಾಂಶದ ಬೆನ್ನಲ್ಲೇ ವಿಜಯ್ ಹಾಗೂ ಅವರ ಮನೆಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಫಲಿತಾಂಶ ಪ್ರಕಟವಾದ ಮೇ 4ರ ರಾತ್ರಿಯಿಂದಲೇ ಅವರಿಗೆ ಮುಖ್ಯಮಂತ್ರಿಗೆ ಒದಗಿಸಲಾಗುವ ಪೊಲೀಸ್ ಭದ್ರತೆ ಮತ್ತು ಬೆಂಗಾವಲನ್ನು ನೀಡಲಾಗಿತ್ತು.
ಕಳೆದ ಮೂರು ದಿನಗಳಿಂದ ವಿಜಯ್ ಪೊಲೀಸ್ ಬೆಂಗಾವಲಿನೊಂದಿಗೆ ಹಲವೆಡೆ ಸಂಚರಿಸಿದ್ದಾರೆ. ಮಂಗಳವಾರವೂ ಕೂಡ ರಾಜಭವನ ಮತ್ತು ಪತ್ತಿನಪಕ್ಕಂಗೆ ಬೆಂಗಾವಲಿನೊಂದಿಗೆ ತೆರಳಿದ್ದರು. ಸರ್ಕಾರ ರಚನೆಗೆ ಬಹುಮತದ ಕೊರತೆ ಎದುರಿಸುತ್ತಿರುವ ಅವರು ತಮ್ಮ ಮುಂದಿನ ನಡೆಯ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದರು.
ಈ ಬೆಳವಣಿಗೆಗಳ ನಡುವೆ ವಿಜಯ್ ಭದ್ರತೆಗೆ ನೀಡಲಾದ ಪೊಲೀಸ್ ಬೆಂಗಾವಲು ವಾಹನವನ್ನು ಹಿಂಪಡೆಯಲಾಗಿದೆ. ಎಲ್ಲಾ ವಾಹನಗಳನ್ನು ಆರ್.ಎ.ಪುರಂನಲ್ಲಿರುವ ಪೊಲೀಸರ ಭದ್ರತಾ ಶಾಖೆಯ ಕಚೇರಿಗೆ ಹಿಂತಿರುಗಿಸಲಾಗಿದೆ. ಬೆಂಗಾವಲು ವಾಹನಗಳು ಹೊರಟ ಸ್ವಲ್ಪ ಸಮಯದ ಬಳಿಕ ವಿಜಯ್ ನೀಲಂಗರೈನಲ್ಲಿರುವ ತಮ್ಮ ನಿವಾಸಕ್ಕೆ ತಮ್ಮ ಕಾರಿನಲ್ಲೇ ಒಬ್ಬಂಟಿಯಾಗಿ ಪ್ರಯಾಣಿಸಿದರು ಎಂದು ವರದಿಯಾಗಿದೆ.
ಬೆಂಗಾವಲು ಹಿಂಪಡೆದ ಹಿಂದಿನ ಕಾರಣವೇನು?: ವಿಜಯ್ಗೆ ನೀಡಲಾಗಿದ್ದ ಬೆಂಗಾವಲು ವಾಹನವನ್ನು ಯಾಕೆ ಹಿಂಪಡೆಯಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ವಿಜಯ್ ಸ್ವತಃ ಈ ಬೆಂಗಾವಲು ವಾಹನವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬಹುಮತ ಪಡೆದು ಔಪಚಾರಿಕವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಂತಹ ಭದ್ರತಾ ವ್ಯವಸ್ಥೆಗಳನ್ನು ಸ್ವೀಕರಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸರ್ಕಾರ ರಚಿಸಲು ವಿಜಯ್ ಇನ್ನೂ ಸ್ಪಷ್ಟ ಬಹುಮತ ಗಳಿಸದ ಕಾರಣ ಪೊಲೀಸ್ ಅಧಿಕಾರಿಗಳು ಬೆಂಗಾವಲು ಭದ್ರತೆಯ ಸುತ್ತಲಿನ ಸಂಭಾವ್ಯ ತೊಡಕುಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದರು ಎಂದು ಹೇಳಲಾಗುತ್ತಿದೆ. ಆ ಚರ್ಚೆಗಳ ನಂತರ, ವಿಜಯ್ ಸದ್ಯಕ್ಕೆ ತನಗೆ ಬೆಂಗಾವಲು ರಕ್ಷಣೆಯ ಅಗತ್ಯವಿಲ್ಲ ಎಂದು ತಿಳಿಸಿದ್ದರು ಎಂಬ ಮಾಹಿತಿ ದೊರೆತಿದೆ.
