ಉದಯವಾಹಿನಿ, ಅಮೆರಿಕ : ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೨೦೨೦ ರ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ಬುಡಮೇಲುಗೊಳಿಸಲು ಸಂಚು ರೂಪಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದೆ. ವಿಚಾರಣೆಯ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೋರ್ಟ್ ವಿಚಾರಣೆಯಲ್ಲಿ ಸಹಜವಾಗಿಯೇ ಟ್ರಂಪ್ ಅವರು ನಿರಪರಾಧಿ ಎಂದು ವಾದ ಮಂಡಿಸುವ ಸಾಧ್ಯತೆ ಇದೆ. ಒಂದೆಡೆ ಮುಂಬರುವ ಬಹುನಿರೀಕ್ಷಿತ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಸಿದ್ಧತೆ ನಡೆಸುತ್ತಿದ್ದರೆ ಈಗಾಗಲೇ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದೆ. ಆದರೆ ಇತರೆ ಪ್ರಕರಣಗಳಿಗಿಂತಲೂ ಸದ್ಯ ೨೦೨೦ರ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ಬುಡಮೇಲುಗೊಳಿಸಲು ಸಂಚು ರೂಪಿಸಿದ ಪ್ರಕರಣ ಮಾತ್ರ ಹೆಚ್ಚು ಗಂಭೀರವಾಗಿದೆ ಎನ್ನಲಾಗಿದೆ. ಇನ್ನು ವಿಚಾರಣೆ ನಡೆಯುವ ಮುನ್ನಾದಿನ ಟ್ರಂಪ್ ಅವರು ಎದುರಾಳಿಗಳ ವಿರುದ್ಧ ತೀವ್ರ ರೀತಿಯಲ್ಲಿ ಹರಿಹಾಯ್ದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಥ್ರುಥ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನನಗೆ ಈ ರೀತಿಯ ಜನಬೆಂಬಲ ಈತನಕ ಲಭಿಸಿಲ್ಲ. ಹಾಗಾಗಿ ಎಲ್ಲಾ ಬೆಂಬಲಿಗರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

