ಉದಯವಾಹಿನಿ, ನಟ ಡಾಲಿ ಧನಂಜಯ್ ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಅವರ ಪತ್ನಿ ವೈದ್ಯೆ ಧನ್ಯತಾ, ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾಗಿರುವ ಖುಷಿಯಲ್ಲಿರುವ ನಟ ಡಾಲಿ ಧನಂಜಯ್, ಇದೀಗ ತಮ್ಮ ನವಜಾತ ಶಿಶುವಿಗಾಗಿ ತೊಟ್ಟಿಲು ಖರೀದಿಸುತ್ತಿದ್ದಾರೆ. ಅದೂ ಅಂತಿಥ ಸಾಮಾನ್ಯ ತೊಟ್ಟಿಲಲ್ಲ, ಬದಲಿಗೆ ವಿಶ್ವಪ್ರಸಿದ್ಧವಾಗಿರುವ ಕಲಘಟಗಿಯ ತೊಟ್ಟಿಲು. ಕಲಘಟಗಿ ಪಟ್ಟಣದ ತೊಟ್ಟಿಲಿಗೆ ಸುದೀರ್ಘ ಇತಿಹಾಸವಿದೆ. ಅದಕ್ಕೆ ಅದರದ್ದೇ ಆದ ಪರಂಪರೆ, ಪ್ರಾಮುಖ್ಯತೆ ಇದೆ. ಇಂಥಹಾ ಅಪರೂಪದ ತೊಟ್ಟಿಲನ್ನು ಡಾಲಿ ಖರೀದಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ, ತೊಟ್ಟಿಲು ಪಟ್ಟಣ ಅಂತಲೇ ಸುಪ್ರಸಿದ್ದವಾಗಿದೆ. ಕಳೆದ ನಾಲ್ಕು ತೆಲೆಮಾರುಗಳಿಂದ ಪಟ್ಟಣದ ಸಾವುಕಾರ ಕುಟುಂಬ ವಿಶಿಷ್ಟ ತೊಟ್ಟಿಲುಗಳನ್ನು ಮಾಡುತ್ತಾ ಬಂದಿದೆ. ಇತ್ತೀಚೆಗೆ ಮರದ ತೊಟ್ಟಿಲುಗಳ ಖರೀದಿಸುವವರ ಸಂಖ್ಯೆ ದಯನೀಯವಾಗಿ ಕುಸಿದಿದೆ, ಆದರೂ ಕಲಘಟಗಿ ತೊಟ್ಟಿಲುಗಳು ಮಾತ್ರ ಬೇಡಿಕೆ ಕಳೆದುಕೊಂಡಿಲ್ಲ. ಸಾವುಕಾರ ಕುಟುಂಬದ ಶ್ರೀಧರ್ ಸಾವುಕಾರು ಇದೀಗ ಕಲಘಟಗಿ ಪಟ್ಟಣದ ಚಿತ್ರಗಾರ ಓಣಿಯಲ್ಲಿರುವ ತಮ್ಮ ಮನೆಯಲ್ಲಿ ತೊಟ್ಟಿಲು ತಯಾರು ಮಾಡುವ ತಮ್ಮ ಹಿಂದಿನ ಪೀಳಿಗೆಯ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇವರೇ ಈಗ ಡಾಲಿ ಧನಂಜಯ್ ಅವರಿಗೂ ತೊಟ್ಟಿಲು ನಿರ್ಮಿಸಿಕೊಡಲಿದ್ದಾರೆ.

ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡಿದ್ದ ವರನಟ ಡಾ ರಾಜಕುಮಾರ್, ತಮ್ಮ ಮೊಮ್ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದರಂತೆ. ಅಂಬರೀಶ್ ಅವರು ನಟ ಯಶ್ ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ನಂತರ ಯಶ್ ಅವರು ಅಂಬರೀಶ್ ಪುತ್ರ ಅಭಿಷೇಕ ಪುತ್ರನಿಗೆ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಅನೇಕರು ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡು, ತಮ್ಮ ಮಕ್ಕಳು, ಮರಿಮೊಮ್ಮಕ್ಕಳಿಗಾಗಿ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!