ಉದಯವಾಹಿನಿ, ‘ಕೆಡಿ’ (KD) ಸಿನಿಮಾದ ‘ಸರ್ಸೆ ಸೆರಗು’ ಹಾಡು ಉತ್ತರ ಭಾರತದಲ್ಲಿ ಭಾರಿ ವಿವಾದ ಹುಟ್ಟು ಹಾಕಿತ್ತು. ‘ಸರ್ಕೆ ಚುನರಿ’ ಹೆಸರಿನಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಈ ಹಾಡಿನ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿ ಕುಣಿದಿದ್ದ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್ ಇನ್ನಿತರೆ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿತ್ತು. ಪ್ರೇಮ್ ಸೇರಿದಂತೆ ಇನ್ನಿತರರು ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದ್ದರು. ಆದರೆ ನೋರಾ, ವಿಚಾರಣೆಯನ್ನು ಮುಂದೂಡುತ್ತಾ ಬಂದಿದ್ದರು. ಆದರೆ ಇಂದು ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾದ ನಟಿ ನೋರಾ ಫತೇಹಿ, ಲಿಖಿತ ಕ್ಷಮೆ ಕೇಳಿದ್ದಲ್ಲದೆ, ಒಂದು ಮಹತ್ವದ ನಿರ್ಧಾರವನ್ನು ಸಹ ಪ್ರಕಟಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೋರಾ, ತಾವು ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದರು. ‘ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಅನಿವಾರ್ಯವಾಗಿ ಅಂತಹ ಸಂದರ್ಭ ಎದುರಾಗಿತ್ತು. ಆದರೆ ಒಬ್ಬ ಕಲಾವಿದೆಯಾಗಿ ನಾನು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನಾನು ನಂಬುತ್ತೇನೆ, ಹಾಗಾಗಿ ಈಗ ಆಯೋಗದ ಮುಂದೆ ಕ್ಷಮೆ ಕೇಳಿದ್ದೇನೆ, ಎಲ್ಲವೂ ಲಿಖಿತ ರೂಪದಲ್ಲಿ ನಡೆಯಿತು, ಆಯೋಗದ ಸದಸ್ಯರು ಸಹ ಆತ್ಮೀಯವಾಗಿ ಸಹಕರಿಸಿದರು’ ಎಂದು ಅವರು ಹೇಳಿದರು.
