ಉದಯವಾಹಿನಿ, ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಸಾಕಷ್ಟು ನೋವು ಅನುಭವಿಸಿದರು. ವೈಯಕ್ತಿಕವಾಗಿಯೂ ಈ ಘಟನೆ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಶ್ರೀತೇಜ್ ಮನೆಗೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಚಿಕಿತ್ಸೆ ಮತ್ತು ಮುಂದಿನ ಭವಿಷ್ಯಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲಿ ಕೇವಲ ಸಿನಿಮಾ ಮಾತ್ರ ಪ್ರದರ್ಶನ ಕಾಣುತ್ತಾ ಇರಲಿಲ್ಲ, ಅಲ್ಲಿ ಅಲ್ಲು ಅರ್ಜುನ್ ಕೂಡ ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ನೆರೆದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಶ್ರೀತೇಜ್ ತೀವ್ರವಾಗಿ ಗಾಯಗೊಂಡಿದ್ದನು. ಆತನ ತಾಯಿ ಮೃತಪಟ್ಟಿದ್ದರು. ಮೆದುಳಿಗೆ ಪೆಟ್ಟು ಬಿದ್ದಿದ್ದರಿಂದ ಶ್ರೀತೇಜ್ ಹಲವು ತಿಂಗಳುಗಳ ಕಾಲ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆದಿದ್ದನು. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದರೂ, ಸಂಪೂರ್ಣ ಗುಣಮುಖನಾಗಲು ಇನ್ನೂ ಕಾಲಾವಕಾಶ ಬೇಕಿದೆ.
