ಭಾರತದ ಪರ 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಆಡಿದ್ದ ಪಂಜಾಬ್ ಮೂಲದ ಅಮನ್‌ಪ್ರೀತ್ ಗಿಲ್ಕೇವಲ 36 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಅಸುನೀಗಿದ್ದಾರೆ. ಚಂಡೀಗಢದಲ್ಲಿ ಜನಿಸಿದ ಅಮನ್‌ಪ್ರೀತ್ ಸಿಂಗ್ ಗಿಲ್ ಪಂಜಾಬ್ ಕ್ರಿಕೆಟ್ ತಂಡಕ್ಕಾಗಿ ದೇಶೀಯ ಕ್ರಿಕೆಟ್ ಆಡಿದ್ದರು. 2007 ರಲ್ಲಿ ಶ್ರೀಲಂಕಾದಲ್ಲಿ ನಡೆದ 19 ವರ್ಷದೊಳಗಿನವರ ತ್ರಿಕೋನ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಮನೀಶ್ ಪಾಂಡೆ ಕೂಡ ಆಡಿದ್ದರು. ಇದೀಗ ಗೆಳೆಯ ಅಕಾಲಿಕ ಮರಣದಿಂದ ಆಘಾತಕ್ಕೊಳಗಾಗಿರುವ ವಿರಾಟ್ ಕೊಹ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಮನ್‌ಪ್ರೀತ್ ಅವರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದೇನೆ ಎಂದಿರುವ ವಿರಾಟ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ. ಅಮನ್‌ಪ್ರೀತ್ ಗಿಲ್ ಅವರ ನಿಧನದ ಸುದ್ದಿಗೆ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದು, “ಅಮನ್‌ಪ್ರೀತ್ ಗಿಲ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರು ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.” ಎಂದು ಬರೆದಿದ್ದಾರೆ.
ಅಮನ್‌ಪ್ರೀತ್ ಗಿಲ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅಮನ್‌ಪ್ರೀತ್ ರೋಗದ ವಿರುದ್ಧದ ಹೋರಾಟದಲ್ಲಿ ಸೋತು ಇಹಲೋಕ ತ್ಯಜಿಸಿದ್ದಾರೆ. ಮೇಲೆ ಹೇಳಿದಂತೆ ಗಿಲ್, ಶ್ರೀಲಂಕಾದಲ್ಲಿ ನಡೆದ ಅಂಡರ್-19 ತ್ರಿಕೋನ ಸರಣಿಯಲ್ಲಿ ಭಾರತ ಪರ ಆಡಿದ್ದರು. ಈ ಸರಣಿಯಲ್ಲಿ ಫೈನಲ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಗಿಲ್ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಮನ್‌ಪ್ರೀತ್ ಈ ಸರಣಿಯಲ್ಲಿ ಆಡಿದ್ದ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದರು.
