ಉದಯವಾಹಿನಿ, ಚಮೋಲಿ (ಉತ್ತರಾಖಂಡ): ಅನಾರೋಗ್ಯ ಪೀಡಿತ ಮಾಜಿ ಸೈನಿಕರೊಬ್ಬರನ್ನು ಗ್ರಾಮಸ್ಥರೆಲ್ಲರೂ ಸೇರಿ ತಾವೇ ತಯಾರಿಸಿದ ಸ್ಟ್ರೆಚರ್​ನಲ್ಲಿ ಮಲಗಿಸಿಕೊಂಡು 12 ಕಿ.ಮೀ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ ಪ್ರಸಂಗ ನಡೆದಿದೆ. ರಸ್ತೆ ಸಂಪರ್ಕದಿಂದ ವಂಚಿತಗೊಂಡ ಗ್ರಾಮ: ಉತ್ತರಾಖಂಡದ ಪರ್ವತ ಪ್ರದೇಶ ಚಮೋಲಿ ಜಿಲ್ಲೆಯ ದೇವಲ್ ಅಭಿವೃದ್ಧಿ ಬ್ಲಾಕ್‌ನಲ್ಲಿರುವ ಪಿನೌ ಎಂಬ ದೂರದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದು ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿನ ಅನೇಕ ಹಳ್ಳಿಗಳು ಈವರೆಗೂ ಸರಿಯಾದ ರಸ್ತೆ ಸಂಪರ್ಕವನ್ನೇ ಹೊಂದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪಿನೌ ಗ್ರಾಮ ರಸ್ತೆ ಸಂಪರ್ಕದಿಂದ ವಂಚಿತಕೊಂಡಿದ್ದು, ಯಾರೇ ಅನಾರೋಗ್ಯಕ್ಕೀಡಾಗಲಿ ಅಥವಾ ಇನ್ನ್ಯಾವುದೇ ತುರ್ತು ಸಂದರ್ಭಗಳಲ್ಲಾಗಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಜವಾಬ್ದಾರಿ ಈ ಗ್ರಾಮಸ್ಥರದ್ದಾಗಿದೆ.

ರೋಗಿಯನ್ನ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಗ್ರಾಮಸ್ಥರು; ಗ್ರಾಮದ 65 ವರ್ಷ ವಯಸ್ಸಿನ ಮಾಜಿ ಸೈನಿಕ ಕೇಸರ್ ಸಿಂಗ್ ಎಂಬುವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ರಸ್ತೆ ಸಂಪರ್ಕದ ಕೊರತೆಯಿಂದಾಗಿ, ಆಂಬ್ಯುಲೆನ್ಸ್ ಗ್ರಾಮ ತಲುಪುವುದು ಅಸಾಧ್ಯವಾಗಿತ್ತು. ಗ್ರಾಮಸ್ಥರು ಮರ ಮತ್ತು ಇತರ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಟ್ರೆಚರ್ ಅನ್ನು ನಿರ್ಮಿಸಿದ್ದಲ್ಲದೆ, 12 ಕಿಲೋಮೀಟರ್ ಕಷ್ಟಕರವಾದ ಪರ್ವತ ಮಾರ್ಗಗಳಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಿನೌ ಗ್ರಾಮ ಚಮೋಲಿ ಜಿಲ್ಲೆಯಿಂದ ದೂರ: ರಾಜ್ಯ ರಚನೆಯಾದಾಗಿನಿಂದಲೂ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ. ಧುರಾ – ಧಾರ್ಕೋಟ್-ಬ್ಯಾಂಕ್-ಪಿನೌ ಮಾರ್ಗವನ್ನು ಸಂಪರ್ಕಿಸುವ ರಸ್ತೆಯ ಫೈಲ್ ಸುಮಾರು 10 ವರ್ಷಗಳಿಂದ ಸರ್ಕಾರಿ ಮಟ್ಟದಲ್ಲಿ ಬಾಕಿ ಇದೆ. ಗ್ರಾಮಸ್ಥರು ನಿರಂತರವಾಗಿ ಒತ್ತಾಯ ಮಾಡುತ್ತಲೇ ಬರುತ್ತಿದ್ದಾರೆ. ಮನವಿ ಸಲ್ಲಿಸಿ ಬೇಸತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಭರವಸೆ ನೀಡಿ ಹೋಗುತ್ತಾರೆ. ಮತ್ತೆ ಪುನಃ ಬರುವುದೇ ಇಲ್ಲ. ಗೆದ್ದ ನಂತರ, ಗ್ರಾಮದ ಸಮಸ್ಯೆಗಳನ್ನು ಮರೆತುಬಿಡುತ್ತಿದ್ದಾರೆ. ರಸ್ತೆ ನಿರ್ಮಾಣದ ಕೊರತೆಯಿಂದಾಗಿ, ಗ್ರಾಮಸ್ಥರು ಪ್ರತಿದಿನ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ಪಿನೌ ಗ್ರಾಮ ಚಮೋಲಿ ಜಿಲ್ಲೆಯಿಂದ ದೂರ ಇದೆ ಅಂತೆಲ್ಲ ಕಾರಣ ನೀಡಿ ಮೂಲಭೂತ ಸೌಕರ್ಯಗಳನ್ನೂ ನೀಡುತ್ತಿಲ್ಲ ಎಂದು ಗ್ರಾಮದ ಮುಖ್ಯಸ್ಥ ಲಖ್‌ಪತ್ ದಾನು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!