ಉದಯವಾಹಿನಿ, ಒಟ್ಟಾವ: ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊ ಹಾಗೂ ಪತ್ನಿ ಸೋಫಿ ಗ್ರೆಗೊರಿ ಅವರು ತಾವು ವೈವಾಹಿಕ ಜೀವನವನ್ನು ಮುರಿದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಇವರಿಬ್ಬರ 18 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡಿದೆ. ‘ಹಲವು ಅರ್ಥಪೂರ್ಣ ಹಾಗೂ ಕ್ಲಿಷ್ಟಕರ ಮಾತುಕತೆ ಬಳಿಕ ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎನ್ನುವ ವಿಚಾರವನ್ನು ನಾನು ಮತ್ತು ಸೋಫಿ ಹಂಚಿಕೊಳ್ಳುತ್ತಿದ್ದೇವೆ’ ಎಂದು ಟ್ರೂಡೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಸಂಬಂಧದಲ್ಲಿ ಈ ಹಿಂದೆ ಬಂದ ಕಷ್ಟಗಳ ಬಗ್ಗೆ ಮಾತನಾಡಿದ ದಂಪತಿ, ವಿಚ್ಛೇದಿತರಾಗುವುದಾಗಿ ಹೇಳಿದ್ದಾರೆ. ಕೆಲ ವರ್ಷಗಳಿಂದ ಇಬ್ಬರು ಸಾರ್ವಜನಿಕವಾಗಿ ಭಾರಿ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದರು. ಟ್ರುಡೊ (51) ಹಾಗೂ ಸೋಫಿ (48) 2015ರಲ್ಲಿ ವಿವಾಹವಾಗಿದ್ದರು. ಅವರಿಗೆ 9,14 ಹಾಗೂ 15 ವರ್ಷದ ಮೂರು ಮಕ್ಕಳಿದ್ದಾರೆ. ಟ್ರೂಡೊ ಅವರ ತಂದೆ ಮಾಜಿ ಪ್ರಧಾನಿ ಪಿರೆ ಟ್ರೂಡೊ, 1977ರಲ್ಲಿ ಪತ್ನಿ ಮಾರ್ಗರೇಟ್ ಅವರಿಂದ ಬೇರೆಯಾಗಿದ್ದರು.
2015ರಲ್ಲಿ ಪ್ರಧಾನಿಯಾದ ಬಳಿಕ ಕುಟುಂಬದ ಬಗ್ಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗದಿದ್ದರಿಂದ ಇಬ್ಬರ ನಡುವೆ ಮನಸ್ತಾಪ ಮೂಡಿತ್ತು ಎನ್ನಲಾಗಿದೆ.ಕಾನೂನು ಕಡತಗಳಿಗೆ ದಂಪತಿ ಸಹಿ ಹಾಕಿದ್ದು, ಮಕ್ಕಳನ್ನು ಇಬ್ಬರೂ ಸೇರಿ ಪೋಷಿಸಲು ಒಪ್ಪಿಕೊಂಡಿದ್ದಾರೆ. ಮುಂದಿನ ವಾರ ಇಬ್ಬರೂ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಟ್ರೂಡೊ ಅವರ ಕಚೇರಿ ತಿಳಿಸಿದೆ.
