ಉದಯವಾಹಿನಿ, ರಾಯ್‌ಪುರ : ಛತ್ತೀಸ್‌ಗಢದ ಅತ್ಯಂತ ಸುರಕ್ಷಿತ ಜೈಲುಗಳಲ್ಲಿ ಒಂದೆಂದು ಪರಿಗಣಿಸಲಾದ ರಾಯ್‌ಪುರ ಕೇಂದ್ರ ಕಾರಾಗೃಹವು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಯುವತಿಯೊಬ್ಬಳು ಜೈಲಿನಲ್ಲಿರುವ ತನ್ನ ಗೆಳೆಯನನ್ನು ಭೇಟಿಯಾಗಿದ್ದಾಳೆ. ಈ ವೇಳೆ ಜೈಲಿನ ಸಂದರ್ಶಕ ಕೋಣೆಯೊಳಗೆ ಮುಕ್ತವಾಗಿ ವಿಡಿಯೊ ರೆಕಾರ್ಡ್ ಮಾಡಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಜೈಲಿನ ಭದ್ರತೆ ಮತ್ತು ಅಧಿಕೃತ ಮೇಲ್ವಿಚಾರಣೆಯ ಬಗ್ಗೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಯುವತಿಯು ಭಾವನಾತ್ಮಕವಾಗಿ ಕ್ಯಾಮರಾದ ಮುಂದೆ ಮಾತನಾಡುತ್ತ, ʼʼನನ್ನ ಪ್ರೇಮಿಯ ಹುಟ್ಟುಹಬ್ಬ. ನಾನು ಅವನನ್ನು ಭೇಟಿಯಾಗಲು ಕೇಂದ್ರ ಕಾರಾಗೃಹಕ್ಕೆ ಬಂದಿದ್ದೇನೆ. ಅವನು ನನ್ನೊಂದಿಗೆ ಇಲ್ಲದಿರುವುದು ತುಂಬ ನೋವುಂಟು ಮಾಡುತ್ತದೆ. ಅವನ ಹುಟ್ಟುಹಬ್ಬದಂದು ನಾನು ಅವನೊಂದಿಗೆ ಇಲ್ಲ. ಆದರೆ ನಾನು ಅವನನ್ನು ಭೇಟಿಯಾಗಲು ಬಂದಿದ್ದೇನೆ. ಅವನ ಪ್ರತಿಕ್ರಿಯೆ ಏನೆಂದು ನೋಡೋಣʼʼ ಎಂದು ಹೇಳಿದ್ದಾಳೆ. ಸಂದರ್ಶಕ ಕೋಣೆಯೊಳಗೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ವಿಡಿಯೊವನ್ನು ಚಿತ್ರೀಕರಿಸಿದ್ದಾಳೆ. ಬಳಿಕ ವಿಡಿಯೊವನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾಳೆ. ಬಳಿಕ ಇದು ವೈರಲ್ ಆಗಿದೆ.
