ಉದಯವಾಹಿನಿ, ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಶನಿವಾರ ಮುಂಜಾನೆಯಿಂದಲೇ ಜೆಸಿಬಿಗಳು ಸದ್ದು ಮಾಡಿದವು. ಬ್ಯಾಡಗಿ ಪಟ್ಟಣದ ಮಧ್ಯೆ ಹಾದುಹೋಗಿರುವ ಗಜೇಂದ್ರಗಡ ಸೊರಬ ರಸ್ತೆ ಅಗಲೀಕರಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಮುಂಜಾನೆಯಿಂದಲೇ ರಸ್ತೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಸ್ವತಃ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಜಿಲ್ಲಾಧಿಕಾರಿಗೆ ಎಡಿಸಿ ನಾಗರಾಜ್, ಎಸಿ ಕಲ್ಯಾಣಿ ಕಾಂಬಳಿ ಸೇರಿದಂತೆ ಪುರಸಭೆ ಪೌರಾಯುಕ್ತರು ಸಾಥ್ ನೀಡಿದರು.
ಸುಮಾರು 10ಕ್ಕೂ ಅಧಿಕ ಜೆಸಿಬಿಗಳು ಬ್ಯಾಡಗಿ ಪುರಸಭೆಯ ವಾಹನಗಳು, ಪುರಸಭೆಯ ಪೌರಕಾರ್ಮಿಕರು, ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದರು. ಕಟ್ಟಡಗಳನ್ನು ಒಡೆದು ಹಾಕಲಾಯಿತು. ಕಟ್ಟಡದ ಮುಂದೆ ಹಾಕಲಾಗಿದ್ದ ಕಬ್ಬಿಣದ ತಗಡಿನ ಶೆಡ್‌ಗಳನ್ನು ಅತ್ಯಾಧುನಿಕ ಯಂತ್ರಗಳಿಂದ ಕತ್ತರಿಸಿ ಸಾಗಿಸಲಾಯಿತು. ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
15 ವರ್ಷಗಳ ಕನಸು: ಗಜೇಂದ್ರಗಡ ಮತ್ತು ಸೊರಬ ಸಂಪರ್ಕಿಸುವ ರಾಜ್ಯ ಹೆದ್ದಾರಿ ಬ್ಯಾಡಗಿ ಪಟ್ಟಣದಲ್ಲಿ ಹಾದುಹೋಗುತ್ತದೆ. ಹೆದ್ದಾರಿ ಕಾಮಗಾರಿ ಉಳಿದೆಡೆ ಮುಕ್ತಾಯವಾಗಿದೆ. ಆದರೆ, ಬ್ಯಾಡಗಿ ಪಟ್ಟಣದಲ್ಲಿ ಮಾತ್ರ ರಸ್ತೆ ಅಗಲೀಕರಣವಾಗಿರಲಿಲ್ಲ. ಹಲವು ಬಾರಿ ಹೋರಾಟ ನಡೆಸಲಾಗಿತ್ತು. ಅಗಲೀಕರಣಕ್ಕೆ ಮುಂದಾಗುತ್ತಿದ್ದಂತೆ ನ್ಯಾಯಾಲಯಗಳಿಂದ ಸ್ಟೇ ತರಲಾಗಿತ್ತು. ಇನ್ನು ಕೆಲವರು ಪರಿಹಾರ ನೀಡುತ್ತೇವೆ ಎಂದರೂ ಕಟ್ಟಡ ಬಿಟ್ಟುಕೊಡಲು ಮುಂದಾಗಿರಲಿಲ್ಲ. ಹಲವು ಸಂಘಟನೆಗಳು ಹೋರಾಟ ಮಾಡಿದ್ದವು. ಅಲ್ಲದೇ, ಇದಕ್ಕಾಗಿ ಅಗಲೀಕರಣ ಹೋರಾಟ ಸಮಿತಿ ರಚನೆಯಾಗಿತ್ತು. ಆದರೂ ಸಹ ಒಂದಿಲ್ಲೊಂದು ಕಾರಣದಿಂದ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿತ್ತು.
ಕಳೆದ ನಾಲ್ಕು ತಿಂಗಳಿಂದ ರಸ್ತೆ ಅಗಲೀಕರಣ ರೂಪುರೇಷೆ ರಚಿಸಿದ್ದ ಜಿಲ್ಲಾಡಳಿತ ಇದೀಗ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಇದರಿಂದಾಗಿ ಬ್ಯಾಡಗಿ ನಿವಾಸಿಗಳ ಕನಸು ನನಸಾಗಿದೆ. ಚಿಕ್ಕದಾದ ರಸ್ತೆಗಳಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿತ್ತು. ಅದರಲ್ಲೂ ಮೆಣಸಿನಕಾಯಿ ಸೀಸನ್ ಇದ್ದಾಗ ಸೋಮವಾರ ಮತ್ತು ಗುರುವಾರ ಈ ರಸ್ತೆಯಲ್ಲಿ ಸಾಗಬೇಕೆಂದರೆ ಹಲವು ಅಡೆತಡೆಗಳಾಗುತ್ತಿದ್ದವು. ಜಿಲ್ಲಾಡಳಿತದ ರಸ್ತೆ ಅಗಲೀಕರಣದಿಂದ ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಸ್ಥಳೀಯರು ತಿಳಿಸಿದರು.
