ಉದಯವಾಹಿನಿ,ಕೊಚ್ಚಿ, : ಮಾಡೆಲ್ ಓರ್ವರ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಲಯಾಳಂ ಚಿತ್ರರಂಗದ ಸಹ ನಿರ್ದೇಶಕ, ಅಲಪ್ಪುಳ ಜಿಲ್ಲೆಯ ಚೆಂಗನ್ನೂರ್ ನಿವಾಸಿ ಜೋಜೊ ಕುರಿಶಿಂಕಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಕುರಿಶಿಂಕಲ್ ಹಲವಾರು ಚಿತ್ರಗಳಲ್ಲಿ ಸಹಾಯಕ ಮತ್ತು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ಮರಡು ಪೊಲೀಸ್ ಠಾಣೆಯಲ್ಲಿ ಮೇ 6ರಂದು ದಾಖಲಾಗಿರುವ ದೂರಿನಲ್ಲಿ ಆರೋಪಿಯು ಮದುವೆ ಭರವಸೆ ನೀಡಿ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.
ಈ ಜೋಡಿ ಜು. 2023ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿದ್ದರು. ಆರೋಪಿಯು ಮೊದಲ ಪತ್ನಿಯೊಂದಿಗಿನ ವಿಚ್ಛೇದನ ಪ್ರಕರಣವನ್ನು ಬಗೆಹರಿಸಿಕೊಂಡ ಬಳಿಕ ಮದುವೆಯಾಗುವುದಾಗಿ ಆಕೆಗೆ ಭರವಸೆ ನೀಡಿದ್ದನು. ಎ. 18, 2024ರಂದು ವೈಟ್ಟಿಲದಲ್ಲಿಯ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿಯು ನಂತರವೂ ಪದೇ ಪದೇ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಮತ್ತು ಬಳಿಕ ಮದುವೆಗೆ ನಿರಾಕರಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಮಹಿಳೆಯ ಗೋಪ್ಯ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ಆರೋಪಿಯನ್ನು ವಿಚಾರಣೆಗೆ ಕರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
