ಉದಯವಾಹಿನಿ, ಕ್ಯಾಲಿಫೋರ್ನಿಯಾ: ವಿಶ್ವದ ಪ್ರಖ್ಯಾತ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆಯಾದ ಟೆಸ್ಲಾ ತನ್ನ ಬಹುನಿರೀಕ್ಷಿತ ‘ಸೈಬರ್‌ಟ್ರಕ್’ ಮಾದರಿಯ ಕೆಲವು ವಾಹನಗಳಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿ ) ಘೋಷಿಸಿದೆ.
ತಯಾರಿಕಾ ಹಂತದಲ್ಲಿ ಉಂಟಾದ ಸಣ್ಣ ಲೋಪವು ದೊಡ್ಡ ಮಟ್ಟದ ಅಪಘಾತಕ್ಕೆ ದಾರಿಯಾಗುವ ಸಾಧ್ಯತೆ ಇರುವುದರಿಂದ ಕಂಪನಿಯು ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ.
ಈ ಮರುಪಡೆಯುವಿಕೆಗೆ ಮುಖ್ಯವಾಗಿ ಬ್ರೇಕ್ ರೋಟರ್‌ಗಳಲ್ಲಿನ ಬಿರುಕು ಮತ್ತು ತಪ್ಪಾದ ಗ್ರೀಸ್ ಬಳಕೆ ಕಾರಣ ಎಂದು ಗುರುತಿಸಲಾಗಿದೆ. ವಾಹನ ತಯಾರಿಕೆಯ ಸಮಯದಲ್ಲಿ ಸರಿಯಾದ ಸಂವಹನದ ಕೊರತೆಯಿಂದಾಗಿ, ಚಕ್ರದ ಭಾಗಗಳಿಗೆ ತಪ್ಪು ಮಾದರಿಯ ಗ್ರೀಸ್ ಅನ್ನು ಬಳಸಲಾಗಿದೆ. ಈ ತಪ್ಪಾದ ಗ್ರೀಸ್ ಬಳಕೆಯಿಂದಾಗಿ ಚಕ್ರದ ರೋಟರ್‌ನಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಇದರಿಂದ ಚಕ್ರವನ್ನು ಹಬ್‌ಗೆ ಜೋಡಿಸಿರುವ ‘ಸ್ಟಡ್‌ಗಳು’ ಬೇರ್ಪಟ್ಟು, ಚಾಲನೆಯಲ್ಲಿರುವಾಗಲೇ ಚಕ್ರ ಕಳಚಿಬೀಳುವ ಅಪಾಯವಿದೆ. ಇದು ಚಾಲಕನ ನಿಯಂತ್ರಣ ತಪ್ಪಿಸಿ ಭೀಕರ ಅಪಘಾತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತವಾಗಿದೆ.
