ಉದಯವಾಹಿನಿ, ಮಾಸ್ಕೋ: ನಾಲ್ಕು ವರ್ಷಗಳಿಂದ ಜಗತ್ತಿನ ಗಮನ ಸೆಳೆದಿರುವ ರಷ್ಯಾ-ಉಕ್ರೇನ್ ಯುದ್ಧ ಕೊನೆಗೂ ಅಂತ್ಯವಾಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀಡಿದ ಹೊಸ ಹೇಳಿಕೆ ಇದೀಗ ಶಾಂತಿ ಮಾತುಕತೆಗಳ ಬಗ್ಗೆ ಹೊಸ ನಿರೀಕ್ಷೆ ಹುಟ್ಟಿಸಿದೆ.ಮಾಸ್ಕೋದಲ್ಲಿ ನಡೆದ ವಿಜಯ ದಿನಾಚರಣೆಯ ವೇಳೆ ಮಾತನಾಡಿದ ಪುಟಿನ್, ಯುದ್ಧ ಮುಗಿಯುವ ಹಂತಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಅವರು ಪರೋಕ್ಷವಾಗಿ ಯುದ್ಧ ನಿಲ್ಲಿಸುವ ಬಗ್ಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದ ಮೂರು ದಿನಗಳ ಕದನ ವಿರಾಮವನ್ನು ರಷ್ಯಾ ಮತ್ತು ಉಕ್ರೇನ್ ಪಾಲಿಸಲು ಆರಂಭಿಸಿವೆ. ಜೊತೆಗೆ, ಎರಡೂ ದೇಶಗಳು ತಲಾ 1,000 ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ. ಯುದ್ಧ ಆರಂಭವಾದ ನಂತರ ನಡೆದ ಅತಿದೊಡ್ಡ ಕೈದಿಗಳ ವಿನಿಮಯಗಳಲ್ಲಿ ಇದೂ ಒಂದಾಗಿದೆ.
ಸಂಧಾನದ ಬಗ್ಗೆ ಮಾತನಾಡಿದ ಪುಟಿನ್, ಯುರೋಪಿಯನ್ ನಾಯಕರೊಂದಿಗೆ ಮತ್ತೆ ಸಂವಾದಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಜೊತೆ ನೇರ ಮಾತುಕತೆ ನಡೆಸಲು ಮೊದಲು ಶಾಂತಿ ಒಪ್ಪಂದದ ಬಗ್ಗೆ ಸಾಮಾನ್ಯ ಅರ್ಥೈಸಿಕೆ ಬೇಕು ಎಂದು ಷರತ್ತು ಹಾಕಿದ್ದಾರೆ. ಇನ್ನೊಂದೆಡೆ, ಟ್ರಂಪ್ ಯುದ್ಧವನ್ನು ಶಾಶ್ವತವಾಗಿ ನಿಲ್ಲಿಸಲು ಎರಡೂ ದೇಶಗಳು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ. ಈ ಯುದ್ಧವು ಎರಡನೇ ಮಹಾಯುದ್ಧದ ನಂತರ ಮಾನವ ಜೀವಹಾನಿಯ ದೃಷ್ಟಿಯಿಂದ ಅತ್ಯಂತ ಭೀಕರವಾಗಿದೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 2022ರಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ಅನೇಕ ಉಕ್ರೇನ್ ನಗರಗಳು ಸಂಪೂರ್ಣ ಹಾನಿಗೊಳಗಾಗಿವೆ. ಈಗ ಪುಟಿನ್ ಹೇಳಿಕೆಯ ನಂತರ ಯುದ್ಧ ಅಂತ್ಯವಾಗುವ ನಿರೀಕ್ಷೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.

Leave a Reply

Your email address will not be published. Required fields are marked *

error: Content is protected !!