ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾನುವಾರ ಭಾರತದೊಂದಿಗಿನ ಕಳೆದ ವರ್ಷದ ಸಂಘರ್ಷವನ್ನು ‘ಎರಡು ಸಿದ್ಧಾಂತಗಳ ನಡುವಿನ ಯುದ್ಧ’ ಎಂದು ಕರೆದಿದ್ದಾರೆ. ಭಾರತದೊಂದಿಗಿನ ನಾಲ್ಕು ದಿನಗಳ ಸಂಘರ್ಷಕ್ಕೆ ಇಸ್ಲಾಮಾಬಾದ್ ನೀಡಿದ ‘ಮರ್ಕಾ-ಎ-ಹಕ್’ ಹೆಸರಿನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ರಾವಲ್ಪಿಂಡಿಯ ಜನರಲ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುನೀರ್, ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದ ತಂತ್ರವು ಭಾರತಕ್ಕಿಂತ ‘ಶ್ರೇಷ್ಠ’ವಾಗಿತ್ತು ಎಂದು ಹೇಳಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನರು ಸಾವಿಗೀಡಾಗಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಕಳೆದ ವರ್ಷ ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ, ಕನಿಷ್ಠ 100 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿತು. ಆದರೆ, ಅವುಗಳಲ್ಲಿ ಹೆಚ್ಚಿನದನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಬಳಿಕ ಮೇ 10, 2025 ರಂದು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಒಪ್ಪಂಧ ಮಾಡಿಕೊಂಡವು.  ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುನೀರ್, ಕಳೆದ ವರ್ಷ ಮೇ 6-7ರ ರಾತ್ರಿ ಮತ್ತು ಮೇ 10ರ ನಡುವೆ ಭಾರತವು ಪಾಕಿಸ್ತಾನದ ‘ಸಾರ್ವಭೌಮತ್ವ ಮತ್ತು ಗಡಿ ಪ್ರದೇಶದ’ ಮೇಲೆ ಹಸ್ತಕ್ಷೇಪ ಮಾಡಿದೆ. ಪಾಕಿಸ್ತಾನವು ‘ಸಂಪೂರ್ಣ ರಾಷ್ಟ್ರೀಯ ಏಕತೆ ಮತ್ತು ಮಿಲಿಟರಿ ಬಲದಿಂದ’ ಪ್ರತಿಕ್ರಿಯಿಸಿತು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!