ಉದಯವಾಹಿನಿ, ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಅವರು ಇಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಐತಿಹಾಸಿಕ ಸಮಾರಂಭದಲ್ಲಿ ರಾಜಕೀಯ ಗಣ್ಯರಷ್ಟೇ ಅಲ್ಲದೆ, ಚಿತ್ರರಂಗದ ತಾರೆಯರ ದಂಡೇ ಹರಿದು ಬಂದಿತ್ತು. ಈ ಪೈಕಿ ವಿಜಯ್ ಅವರ ಆಪ್ತ ಗೆಳತಿ ಹಾಗೂ ನಟಿ ತ್ರಿಷಾ ಕೃಷ್ಣನ್ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮಕ್ಕೆ ತ್ರಿಷಾ ಅವರು ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದ್ದರು. ನೀಲಿ ಬಣ್ಣದ ರೇಷ್ಮೆ ಸೀರೆ ಧರಿಸಿ, ಮಲ್ಲಿಗೆ ಮುಡಿದು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದ ತ್ರಿಷಾ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ತ್ರಿಷಾ ಅವರು ಅಭಿಮಾನಿಗಳತ್ತ ಕೈಬೀಸಿ ನಗುತ್ತಾ ಸಾಗಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಈ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಒಂದು ಕುತೂಹಲಕಾರಿ ಚರ್ಚೆ ಶುರುವಾಗಿದೆ. ವಿಜಯ್ ಅವರು ಈ ಚುನಾವಣೆಯಲ್ಲಿ ತಿರುಚ್ಛಿ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ನಿಯಮದಂತೆ ಅವರು ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ. ತೆರವಾಗುವ ಆ ಕ್ಷೇತ್ರದಲ್ಲಿ ತ್ರಿಷಾ ಅವರು ಟಿವಿಕೆ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಹರಡಿವೆ. ತ್ರಿಷಾ ಸ್ಪರ್ಧೆಯ ಬಗ್ಗೆ ಟಿವಿಕೆ ಪಕ್ಷವಾಗಲಿ ಅಥವಾ ಸ್ವತಃ ತ್ರಿಷಾ ಅವರಾಗಲಿ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈ ಹಿಂದೆ ಚುನಾವಣಾ ಫಲಿತಾಂಶ ಬಂದ ದಿನ ತ್ರಿಷಾ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಇದು ಕೂಡ ಅವರ ರಾಜಕೀಯ ಪ್ರವೇಶದ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿತ್ತು. ವಿಜಯ್ ಅವರ ಸಿನಿ ಪಯಣದ ಯಶಸ್ವಿ ನಟಿಯಾಗಿರುವ ತ್ರಿಷಾ, ಈಗ ಅವರ ರಾಜಕೀಯ ಪಯಣದಲ್ಲೂ ಬೆಂಬಲವಾಗಿ ನಿಂತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Leave a Reply

Your email address will not be published. Required fields are marked *

error: Content is protected !!