ಉದಯವಾಹಿನಿ, ಚಂದನವನದ ಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ‘ಬಂದರ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ವಿಭಿನ್ನ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ‘ಸು ಫ್ರಂ ಸೋ’, ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹಾಗೂ ಇತ್ತೀಚೆಗೆ ಬಿಡುಗಡೆಯಾದ ’45’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ, ಯಶಸ್ವಿಯಾಗಿರುವ ರಾಜ್ ಬಿ. ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಹಿಂದಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರೆ. ಇದು ಅವರ ನಟನೆಯ ಚೊಚ್ಚಲ ಬಾಲಿವುಡ್ ಸಿನಿಮಾವಾಗಲಿದೆ. ಸಿನಿಮಾದ ಟೀಸರ್ ವಿಭಿನ್ನವಾಗಿದ್ದು, ಹಾಡಿನ ಮೂಲಕ ಆರಂಭವಾಗುತ್ತದೆ. ಮಾತ್ರವಲ್ಲದೆ, ಟೀಸರ್‌ನ ದೃಶ್ಯವೊಂದರಲ್ಲಿ ರಾಜ್ ಬಿ ಶೆಟ್ಟಿಯವರು ವ್ಯಕ್ತಿಯೊಬ್ಬರ ಜೊತೆ ಸೇರಿ ನೃತ್ಯ ಮಾಡುತ್ತಿದ್ದಾರೆ. ಜೂನ್ 5ರಂದು ಸಿನಿಮಾ ಬಿಡುಗಡೆಯಾಗಲಿದೆ.
ಅನುರಾಗ್ ಕಶ್ಯಪ್ ಅವರ ನಿರ್ದೇಶನದಲ್ಲಿ ‘ಬಂದರ್’ ಸಿನಿಮಾ ಮೂಡಿಬಂದಿದೆ. ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ಚಿತ್ರಕಥೆ ಬರೆದಿದ್ದಾರೆ. ಪ್ರಮುಖ ಪಾತ್ರದಲ್ಲಿ ಬಾಬಿ ಡಿಯೋಲ್, ರಾಜ್ ಬಿ ಶೆಟ್ಟಿ, ಸಾನ್ಯಾ ಮಲ್ಲೋತ್ರಾ ಮತ್ತು ಇಂದ್ರಜಿತ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ.
