ಉದಯವಾಹಿನಿ, ಬೆಂಗಳೂರು: ಮೇ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಇದೇ ವೇಳೆ, ಪ್ರಸ್ತುತ ಇರುವ ಗೊಂದಲದ ಪರಿಸ್ಥಿತಿ ನಿವಾರಣೆ ಆಗಬೇಕು ಅಂದ್ರೆ ಸಿದ್ದರಾಮಯ್ಯನವರು ಮುಂದುವರಿಯಬೇಕು, ಇಲ್ಲವೇ ಅವರಿಗೆ ಸಂಪುಟ ಪುನಾರಚನೆ ಮಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜಣ್ಣ, ಪಂಚರಾಜ್ಯ ಚುನಾವಣಾ ಪ್ರಕ್ರಿಯೆ ಪೂರ್ಣ ಆಗಿಲ್ಲ. ಸಂಪೂರ್ಣವಾಗಿ ಅದು ಆಗಲಿ. ಕೇರಳ ಸಿಎಂ ಆಯ್ಕೆ ಬಾಕಿ ಇದೆ. ಅದು ಪೂರ್ಣವಾದ ನಂತರ ಏನೆಲ್ಲಾ ಬೆಳವಣಿಗೆಗಳು ಆಗುತ್ತವೆ ಹೇಳುತ್ತೇನೆ. ನಾನು ಮೇ ತಿಂಗಳಲ್ಲಿ ಬದಲಾವಣೆಗಳು ಆಗುತ್ತವೆ ಅಂತ ಹೇಳಿದ್ದೆ. ಮೇ 20 ಅಂತ ನಾನು ಡೆಡ್ಲೈನ್ ಏನೂ ಕೊಟ್ಟಿಲ್ಲ. ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಬದಲಾವಣೆಗಳು ಆಗುತ್ತವೆ. ನಮ್ಮ ಪಾರ್ಟಿಯಲ್ಲೂ ಆಗುತ್ತವೆ, ಬೇರೆ ಪಾರ್ಟಿಯಲ್ಲೂ ಆಗುತ್ತವೆ ಅಂತ ನಿರೀಕ್ಷೆ ಮಾಡಿದ್ದೇನೆ ಎಂದಿದ್ದೆ. ಇನ್ನೂ 20 ದಿನ ಇದೆಯಲ್ಲ, ನೋಡೋಣ ಏನಾಗುತ್ತದೆ ಅಂತ. ಈಗ ಒಂದು ಗೊಂದಲದ ಪರಿಸ್ಥಿತಿ ಇದೆ. ಅದನ್ನು ನೀವು (ಮಾಧ್ಯಮ) ನೋಡಿದ್ದೀರಿ. ಜನರೂ ನೋಡಿದ್ದಾರೆ. ಆ ಗೊಂದಲದ ಪರಿಸ್ಥಿತಿಯನ್ನು ನಿವಾರಣೆ ಮಾಡಬೇಕು ಅಂದ್ರೆ ಸಿದ್ದರಾಮಯ್ಯನವರು ಮುಂದುವರಿಯಬೇಕು. ಇಲ್ಲವೇ ಅವರಿಗೆ ಸಂಪುಟ ಪುನಾರಚನೆ ಮಾಡೋದಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರಿಗೆ ಎಲ್ಲಿಯವರೆಗೂ ಸಂಪುಟ ಪುನಾರಚನೆಗೆ ಅವಕಾಶ ಕೊಡೋದಿಲ್ಲವೋ ಅಲ್ಲಿಯವರೆಗೂ ಡೋಲಾಯಮಾನ ತಾನೇ ಅದು. ಅದಕ್ಕೋಸ್ಕರ ಸಂಪುಟ ಪುನಾರಚನೆಗೆ ಅವಕಾಶ ಕೊಡಿ ಅಂತ ಅನೇಕರು ಒತ್ತಡ ಹಾಕಿದ್ದಾರೆ. ಬಹಳಷ್ಟು ಶಾಸಕರು ದೆಹಲಿಗೆ ಹೋಗಿ ಎಲ್ಲಾ ಮುಖಂಡರುಗಳನ್ನು ಭೇಟಿ ಮಾಡಿ ಒತ್ತಡ ತಂದಿದ್ದಾರೆ. ನಾಯಕತ್ವ ಬದಲಾವಣೆ ಮಾಡುತ್ತೇವೆ ಅಂತನಾದ್ರೂ ಹೈಕಮಾಂಡ್ ಹೇಳಬೇಕು. ಇಲ್ಲ ಅಂದ್ರೆ ಇಲ್ಲ ಅಂತನಾದ್ರೂ ಹೇಳಬೇಕು. ಏನಾದರೂ ಒಂದು ಆಗಬೇಕಲ್ಲ?. ಇಲ್ಲಿ ಗೊಂದಲ ಇದ್ದರೆ ಸರ್ಕಾರದಲ್ಲಿ ಕೂಡ ಸರಿಯಾಗಿ ಕೆಲಸ ನಡೆಯುವುದಿಲ್ಲ. ಪ್ರತಿಪಕ್ಷಗಳಿಗೆ ಇದು ಹಾಸಿಗೆ ಹಾಕಿ ಕೊಟ್ಟಂಗಾಗಿದೆ. ಅದ್ದರಿಂದ ಸರ್ಕಾರ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು ಅಂದ್ರೆ ಹೈಕಮಾಂಡ್ ಈ ಗೊಂದಲ ನಿವಾರಣೆ ಮಾಡಬೇಕು. ಈ ಒತ್ತಾಯ ನಂದು ಮೊದಲಿಂದನೂ ಇದೆ, ಇವತ್ತೂ ಇದೆ ಎಂದರು.
