ಉದಯವಾಹಿನಿ, ದುರ್ಗ್ (ಛತ್ತೀಸ್‌ಗಢ): ದುರ್ಗ್ ಜಿಲ್ಲೆಯ ಕುಮ್ಹಾರಿ ಪೊಲೀಸ್ ಠಾಣೆ ಪ್ರದೇಶದ ವಾರ್ಡ್ 4ರ ಮನೆಯೊಂದರಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಅಡುಗೆ ಅನಿಲ ಸಿಲಿಂಡರ್ ಸ್ಫೋಟದಲ್ಲಿ ಮಗು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಕುಮ್ಹಾರಿಯ ಖಾಪ್ರಿ ರಸ್ತೆಯಲ್ಲಿರುವ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ, ಏಕಾಏಕಿ ಜೋರಾದ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಇಡೀ ಮನೆ ಬೆಂಕಿಗಾಹುತಿಯಾಗಿದೆ.
ಮನೆಯಿಂದ ಬೆಂಕಿ ಹೊರಬರುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಆದರೆ, ಅವರು ಬರುಷ್ಟರಲ್ಲಿ ಬೆಂಕಿ ಮನೆಯನ್ನು ಆವರಿಸಿತ್ತು.
ಬೆಂಕಿಯನ್ನು ನಿಯಂತ್ರಣಕ್ಕೆ ತಂದ ಬಳಿಕ ಮನೆಯ ಒಳಗಿನಿಂದ ನಾಲ್ಕು ಶವಗಳನ್ನು ಹೊರತೆಗೆಯಲಾಯಿತು. ಅದೃಷ್ಟವಶಾತ್, ಬೆಂಕಿ ಅಕ್ಕ-ಪಕ್ಕದ ಮನೆಗಳಿಗೆ ಹರಡಿಲ್ಲ. ಹರಡಿದ್ದರೆ, ಹಾನಿ ಇನ್ನೂ ಹೆಚ್ಚಾಗುತ್ತಿತ್ತು. ಸಿಲಿಂಡರ್ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
