ಉದಯವಾಹಿನಿ, ಚೆನ್ನೈ(ತಮಿಳುನಾಡು): ರಾಜ್ಯದಲ್ಲಿ ರಾಜಕೀಯ ಸಂಚಲನ ಮೂಡಿಸಿ ಮುಖ್ಯಮಂತ್ರಿಯೂ ಆಗಿರುವ ನಟ ವಿಜಯ್​ ಅವರು ಅಧಿಕಾರ ಚಲಾವಣೆ ಆರಂಭಿಸಿದ್ದಾರೆ. ಅವರ ವೈಯಕ್ತಿಕ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯನ್ನಾಗಿ(ಒಎಸ್​ಡಿ) ನೇಮಿಸಿಕೊಂಡಿದ್ದಾರೆ. ಈ ಕುರಿತು ಸಾರ್ವಜನಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಇಂದು (ಮಂಗಳವಾರ) ಆದೇಶ ಹೊರಡಿಸಿದ್ದಾರೆ. ರಿಕಿ ರಾಧನ್​ ಪಂಡಿತ್​ ವೆಟ್ರಿವೇಲ್​ ಅವರು ಮುಖ್ಯಮಂತ್ರಿಯ (ರಾಜಕೀಯ) ವಿಶೇಷ ಕರ್ತವ್ಯ ಅಧಿಕಾರಿಯಾಗಿ ಮೇ 12, 2026 ರಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ. ಈ ಸಂಬಂಧ ನಿಯಮಗಳು ಮತ್ತು ಷರತ್ತುಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿಶೇಷಾಧಿಕಾರಿಯ ಕೆಲಸವೇನು?: ಮುಖ್ಯಮಂತ್ರಿ ವಿಜಯ್​ ನಿಯೋಜಿಸಿಕೊಂಡ ವಿಶೇಷ ಕತ್ಯವ್ಯಾಧಿಕಾರಿಯು ರಾಜಕೀಯ ಸಮನ್ವಯ, ಆಡಳಿತಾತ್ಮಕ ಸಂಪರ್ಕ ಮತ್ತು ಪ್ರಮುಖ ಆದ್ಯತೆಯ ಕಾರ್ಯಗಳನ್ನು ನಿರ್ವಹಿಸಲು ಪ್ರಮುಖ ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಯಾರು ಈ ಪಂಡಿತ್​?: ರಿಕಿ ರಾಧನ್​ ಪಂಡಿತ್​ ವೆಟ್ರಿವೇಲ್​ ಅವರು ಮುಖ್ಯಮಂತ್ರಿ ವಿಜಯ್​ ಅವರ ವೈಯಕ್ತಿಕ ಜ್ಯೋತಿಷಿಯಾಗಿದ್ದಾರೆ. ಒಂದು ವರ್ಷದ ಹಿಂದೆಯೇ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆಯೇ ವಿಜಯ್​ ಅವರ ಪಕ್ಷವು ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಸಿಎಂ ವಿಜಯ್ ಅವರ ಜೊತೆ ರಾಜಕೀಯ ರ್ಯಾಲಿಗಳಲ್ಲಿ ಪಂಡಿತ್ ವೆಟ್ರಿವೇಲ್ ಕಾಣಿಸಿಕೊಳ್ಳುತ್ತಿದ್ದರು. ರಾಜಕೀಯ ಸಂಭವಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದ ಕುರಿತು ವಿಜಯ್‌ಗೆ ಸಲಹೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಪಕ್ಷಕ್ಕೆ ಟಿವಿಕೆ ಎಂದು ಹೆಸರಿಡಲು ಸೂಚಿಸಿದ್ದು ಕೂಡ ಇವರೇ ಎಂದು ಹೇಳಲಾಗಿದೆ. ಕಾರಣ, ವಿಜಯ್ ಅವರ ಜನ್ಮ ವಿವರಗಳಿಗೆ ಟಿವಿಕೆ ಹೊಂದಿಕೆಯಾಗುತ್ತದೆ. ಈ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಪಕ್ಷಕ್ಕೆ ‘ಸುನಾಮಿಯಂತ ಗೆಲುವು’ ಸಿಗಲಿದೆ ಎಂದು ಪಂಡಿತ್​ ಭವಿಷ್ಯ ನುಡಿದಿದ್ದರು.

ದ್ರಾವಿಡ ಪಕ್ಷಗಳ ಮೆಟ್ಟಿ ನಿಂತ TVK: ಪಂಡಿತ್​ ಭವಿಷ್ಯ ಎಷ್ಟು ನಿಜವೋ ಗೊತ್ತಿಲ್ಲ. ಆದರೆ, ಸಿಎಂ ವಿಜಯ್​ ಅವರ ಟಿವಿಕೆ ಪಕ್ಷವು ಅಕ್ಷರಶಃ ತಮಿಳುನಾಡಿನಲ್ಲಿ ರಾಜಕೀಯ ಮಹಾ ಪಲ್ಲಟವನ್ನೇ ಮಾಡಿದೆ. ದಶಕಗಳ ಕಾಲ ರಾಜ್ಯಭಾರ ಮಾಡಿದ್ದ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಪಕ್ಷಗಳನ್ನು ಮಕಾಡೆ ಮಲಗಿಸಿ ಏಕೈಕ ದೊಡ್ಡ ಪಕ್ಷವಾಗಿ ಟಿವಿಕೆ ಅಧಿಕಾರಕ್ಕೆ ಬಂದಿದೆ. ವಿಜಯ್​ ಅವರು ಮೇ 10 ರಂದು ತಮಿಳುನಾಡಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

Leave a Reply

Your email address will not be published. Required fields are marked *

error: Content is protected !!