ಉದಯವಾಹಿನಿ, ನವದೆಹಲಿ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗು ಪರೀಕ್ಷೆ ರದ್ದತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಕಾಲವು ದೇಶಕ್ಕೆ ವಿಷವಾಗಿ ಮಾರ್ಪಟ್ಟಿದೆ. ಅಭಿವೃದ್ಧಿ ಎಂಬುದು ಕೇವಲ ವೈಫಲ್ಯ ಕಂಡಿಲ್ಲ, ಬದಲಾಗಿ ಯುವಜನತೆಯ ಭವಿಷ್ಯದ ವಿರುದ್ಧ ಅಪರಾಧವಾಗಿ ರೂಪುಗೊಂಡಿದೆ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿರುವ ಅವರು, ಮಕ್ಕಳಿಗೆ ನೀಟ್​ ಕೋಚಿಂಗ್​ ಕೊಡಿಸಲು ಪೋಷಕರು ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ಪ್ರಶ್ನೆ ಪತ್ರಿಕೆ ಸೋರಿಕೆ, ಸರ್ಕಾರದ ನಿರ್ಲಕ್ಷ್ಯ, ಶಿಕ್ಷಣ ವಲಯದಲ್ಲಿ ಸಂಘಟಿತ ಭ್ರಷ್ಟಚಾರವನ್ನು ಉಡುಗೊರೆಯಾಗಿ ಪಡೆದಿದ್ದಾರೆ.

2026ರ ನೀಟ್​ ಪರೀಕ್ಷೆ ರದ್ದಾಗಿದೆ. 22 ಲಕ್ಷ ವಿದ್ಯಾರ್ಥಿಗಳ ಕನಸು ಬಿಜೆಪಿ ಆಡಳಿತದಲ್ಲಿ ನುಚ್ಚುನೂರಾಗಿದೆ. ಮಕ್ಕಳ ಭವಿಷ್ಯಕ್ಕೆ ನೀಟ್​ ತಯಾರಿಗಾಗಿ ಕೆಲವು ತಂದೆಯರು ಸಾಲ ಮಾಡಿದ್ದಾರೆ, ಕೆಲವು ತಾಯಂದಿರು ತಮ್ಮ ಆಭರಣ ಮಾಡಿದ್ದಾರೆ. ಲಕ್ಷಾಂತರ ಮಕ್ಕಳು ರಾತ್ರಿಯಿಡೀ ಎದ್ದು ಕುಳಿತು ಓದಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ಪ್ರಶ್ನೆಪತ್ರಿಕೆ ಸೋರಿಕೆಯನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಇದು ಕೇವಲ ವೈಫಲ್ಯವಲ್ಲ, ಯುವಜನತೆಯ ಭವಿಷ್ಯದ ವಿರುದ್ಧದ ಅಪರಾಧ ಎಂದು ರಾಹುಲ್ ಟೀಕಾಪ್ರಹಾರ ನಡೆಸಿದ್ದಾರೆ
ಹಲವು ಬಾರಿ ಪ್ರಶ್ನೆ ಪತ್ರಿಕೆಯ ಸೋರಿಕೆ ಪ್ರಕರಣಗಳ ಬಳಿಕವೂ ಇಂಥ​ ಮಾಫಿಯಾಗಳು ಬಚಾವ್​ ಆಗುತ್ತವೆ. ಆದರೆ, ನಿಷ್ಟಾವಂತ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಲಕ್ಷಾಂತರ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಆರ್ಥಿಕ ಒತ್ತಡ, ಅನಿಶ್ಚಿತತೆಗೆ ಒಳಗಾಗುವಂತಾಗಿದೆ. ಒಬ್ಬರ ಭವಿಷ್ಯವನ್ನು ಕಠಿಣ ಪರಿಶ್ರಮದಿಂದಲ್ಲ, ಹಣ ಮತ್ತು ಸಂಪರ್ಕಗಳಿಂದ ನಿರ್ಧರಿಸಲಾಗುತ್ತದೆ ಎಂದಾದರೆ, ಶಿಕ್ಷಣದ ಅರ್ಥವೇನು? ಪ್ರಧಾನ ಮಂತ್ರಿಯವರ ಅಮೃತ್ ಕಾಲ ಎನ್ನುವ ಈ ಯೋಜನೆ ದೇಶಕ್ಕೆ ವಿಷದ ಕಾಲವಾಗಿ ಮಾರ್ಪಟ್ಟಿದೆ ಎಂದಿದ್ದಾರೆ.ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ನೀಟ್​ ಯುಜಿ-2026 ಪರೀಕ್ಷೆ ರದ್ದು ಮಾಡಿದೆ. ವೈದ್ಯಕೀಯ ಪದವಿ ಪ್ರವೇಶಕ್ಕೆ ನಡೆಯುವ ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್​ ಮೇ 3ರಂದು ನಡೆದಿತ್ತು. ಇದೀಗ ಪರೀಕ್ಷೆ ರದ್ದಾಗಿದ್ದು, ಶೀಘ್ರದಲ್ಲೇ ಮರು ಪರೀಕ್ಷೆ ನಡೆಸಲಾಗುವುದು. ಈ ಕುರಿತು ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!