ಉದಯವಾಹಿನಿ, ಚೆನ್ನೈ(ತಮಿಳುನಾಡು): ಕೇವಲ ಒಂದು ಮತದಿಂದ ತಿರುಪತ್ತೂರು ವಿಧಾನಸಭಾ ಕ್ಷೇತ್ರದಿಂದ ಜಯ ಗಳಿಸಿದ್ದ ಟಿವಿಕೆ ಪಕ್ಷದ ಶಾಸಕ ಆರ್.ಶ್ರೀನಿವಾಸ ಸೇತುಪತಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಹಾಕುವುದಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ತಡೆ ನೀಡಿತು.
ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರ್.ಶ್ರೀನಿವಾಸ ಸೇತುಪತಿ ಅವರೆದುರು ಸೋತ ಡಿಎಂಕೆ ಅಭ್ಯರ್ಥಿ ಕೆ.ಆರ್.ಪೆರಿಯಕರುಪ್ಪನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್.ವಿಕ್ಟೋರಿಯಾ ಗೌರಿ ಮತ್ತು ಎನ್.ಸೆಂಥಿಲ್‌ ಕುಮಾರ್ ಅವರಿದ್ದ ರಜಾಕಾಲದ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 17ನೇ ವಿಧಾನಸಭೆಯಲ್ಲಿ ಶ್ರೀನಿವಾಸ ಸೇತುಪತಿ ಅವರು ಯಾವುದೇ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಲ್ಲೂ ಮತ ಚಲಾಯಿಸುವಂತಿಲ್ಲ. ಟಿವಿಕೆ ಬಹುಮತ ಸಾಬೀತು ಪ್ರಕ್ರಿಯೆ: ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರದ ಮೂರು ದಿನಗಳ ನಂತರ ಬುಧವಾರ ತನ್ನ ಬಹುಮತ ಸಾಬೀತುಪಡಿಸಬೇಕಿದೆ.

ಪೆರಿಯಕರುಪ್ಪನ್ ಅವರು ತಮ್ಮ ಅರ್ಜಿಯಲ್ಲಿ ಮತಗಳ ಮರುಎಣಿಕೆ ಮತ್ತು ಶ್ರೀನಿವಾಸ ಸೇತುಪತಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ತಡೆಯಬೇಕೆಂದು ಮಧ್ಯಂತರ ಆದೇಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಮಾಜಿ ಸಚಿವರಾಗಿರುವ ಪೆರಿಯಕರುಪ್ಪನ್: ಚುನಾವಣೆಯಲ್ಲಿ ಶ್ರೀನಿವಾಸ ಸೇತುಪತಿ 83,365 ಮತಗಳನ್ನು ಪಡೆದರೆ, ಪೆರಿಯಕರುಪ್ಪನ್ 83,364 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಶ್ರೀನಿವಾಸ ಸೇತುಪತಿ ಕೇವಲ ಒಂದು ಮತದ ಅಂತರದಿಂದ ಗೆದ್ದು ಬೀಗಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರಕ್ಕೂ ಒಂದು ದಿನ ಮುಂಚಿತವಾಗಿ ಭಾನುವಾರ ಹೈಕೋರ್ಟ್ ಪೀಠವು ಅರ್ಜಿ ವಿಚಾರಣೆ ನಡೆಸಿತ್ತು.

Leave a Reply

Your email address will not be published. Required fields are marked *

error: Content is protected !!