ಉದಯವಾಹಿನಿ, ಚಂದೌಲಿ (ಉತ್ತರ ಪ್ರದೇಶ): 24 ಗಂಟೆಗಳ ಅವಧಿಯಲ್ಲಿ ಮೂರು ಸರಣಿ ಕೊಲೆ ಮಾಡಿದ ಸೈಕೋ ಕಿಲ್ಲರ್​ನ​ನ್ನು ಉತ್ತರ ಪ್ರದೇಶ ಪೊಲೀಸರು ಎನ್​ಕೌಂಟರ್ ಮಾಡಿದ್ದಾರೆ. ಪಂಜಾಬ್​​ನ ಅಮೃತಸರ ನಿವಾಸಿಯಾಗಿರುವ ಮಾಜಿ ಸೈನಿಕ ಗುರುಪ್ರೀತ್ ಸಿಂಗ್ ಹತನಾದ ಕೊಲೆ ಆರೋಪಿ. ಕೊಲೆ ಪ್ರಕರಣ ಸಂಬಂಧ ಗುರುಪ್ರೀತ್ ಸಿಂಗ್​ನನ್ನು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದು, ಸ್ಥಳ ಮಹಜರಿಗೆ ಕರೆದೊಯ್ದಿದ್ದರು. ಈ ವೇಳೆ, ಪೊಲೀಸರಿಂದ ಪಿಸ್ತೂಲ್ ಕಿತ್ತುಕೊಂಡು ಗುಂಡು ಹಾರಿಸಿದ್ದ. ಪರಿಣಾಮ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್​ಟೇಬಲ್​ ಗಾಯಗೊಂಡಿದ್ದರು. ಈ ವೇಳೆ ತಕ್ಷಣವೇ ಪೊಲೀಸರು ತಮ್ಮ ರಕ್ಷಣೆಗಾಗಿ ಆರೋಪಿಗೆ ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡು ಹೊಟ್ಟೆ ಮತ್ತು ಎದೆ ತಗುಲಿದ್ದರಿಂದ ಆರೋಪಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

2021ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಿಯಾಗಿದ್ದ ಆರೋಪಿಯು ಬಳಿಕ ಸೆಕ್ಯೂರಿಟಿ ಭದ್ರತಾ ಸಿಬ್ಬಂದಿಯಾಗಿ ಬಿಹಾರದಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಅತಿಯಾದ ಮದ್ಯ ಸೇವನೆಯಿಂದ ಕೆಲಸದಿಂದ ವಜಾಗೊಂಡಿದ್ದರು ಎಂದು ಚಂದೌಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಕಾಶ್ ಪಟೇಲ್ ಮಾಹಿತಿ ನೀಡಿದ್ದಾರೆ.

24 ಗಂಟೆಯಲ್ಲಿ ಮೂರು ಕೊಲೆ: ಮೇ 9 ರಂದು ಆರೋಪಿಯು ಬಿಹಾರ, ಪ್ರಯಾಗ್‌ರಾಜ್ ಮತ್ತು ಚಂದೌಲಿ ನಡುವೆ ರೈಲಿನಲ್ಲಿ ಪ್ರಯಾಣಿಸುವಾಗ ಯಾವುದೇ ಉದ್ದೇಶವಿಲ್ಲದೇ ಕೊಲೆಗಳನ್ನು ಮಾಡಿದ್ದಾನೆ. ಮೇ 10 ರ ಬೆಳಗ್ಗೆ ಡಿಡಿಯು-ತಾಡಿಘಾಟ್ ಪ್ಯಾಸೆಂಜರ್ ರೈಲಿನಲ್ಲಿ ಮೊದಲ ಕೊಲೆ ಮಾಡಿದ್ದ. ನಂತರ ಘಾಜಿಪುರದ ಜಮಾನಿಯಾ ನಿವಾಸಿಗೆ ಗುಂಡು ಹಾರಿಸಿ ಕೊಂದಿದ್ದ. ಮೇ 11 ರ ರಾತ್ರಿ ಸುಮಾರು 2 ಗಂಟೆಗೆ ಜಮ್ಮು ತಾವಿ ಎಕ್ಸ್‌ಪ್ರೆಸ್‌ನಲ್ಲಿ ಮತ್ತೊಬ್ಬ ಪ್ರಯಾಣಿಕನ ತಲೆಗೆ ಗುಂಡು ಹೊಡೆದಿದ್ದ ಎಂದು ಎಸ್‌ಪಿ ಆಕಾಶ್ ಪಟೇಲ್ ಮಾಹಿತಿ ನೀಡಿದ್ದಾರೆ.

ಮೊದಲ ಎರಡು ಕೊಲೆಗಳು ಒಂದೇ ರೀತಿಯಾಗಿದ್ದರಿಂದ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು. ಈ ಬೆನ್ನಲ್ಲೇ ಮೇ 11 ರಂದು ಆರೋಪಿ ಮತ್ತೊಂದು ಕೊಲೆ ಮಾಡಿದ್ದು, ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು.

ಆಸ್ಪತ್ರೆಗೆ ಬಂದು ಸಿಕ್ಕಿಬಿದ್ದ ಆರೋಪಿ: ಆರೋಪಿಯು ಕೊಲೆಗಳ ನಂತರ ಔಷಧ ಖರೀದಿ ನೆಪದಲ್ಲಿ ಅಲಿನಗರದ ಆಸ್ಪತ್ರೆಗೆ ಬಂದು ಮೊದಲ ಮಹಡಿಯಲ್ಲಿ ಅಡ್ಮಿಟ್ ಆಗಿದ್ದ ರೋಗಿಯೊಬ್ಬರ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ್ದ. ಆದರೆ ಸಾಧ್ಯವಾಗಿರಲಿಲ್ಲ. ಆಗ ಇಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಸ್ಪತ್ರೆಯಲ್ಲಿ ಈತನ ಗುಂಡಿನ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!