ಉದಯವಾಹಿನಿ, ಭಾರತ ತಂಡದ ಮಾಜಿ ನಾಯಕ ಹಾಗೂ ತರಬೇತುದಾರ ರಾಹುಲ್ ದ್ರಾವಿಡ್ ಯುರೋಪಿಯನ್ ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಯ ತಂಡವೊಂದರ ಸಹ ಮಾಲೀಕತ್ವ ವಹಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಸಹ-ಸ್ಥಾಪಕರಾಗಿರುವ ETPL ಟೂರ್ನಮೆಂಟ್‌ನಲ್ಲಿ, ರಾಹುಲ್ ದ್ರಾವಿಡ್ ಅವರು ಐರ್ಲೆಂಡ್ ಮೂಲದ ‘ಡಬ್ಲಿನ್ ಗಾರ್ಡಿಯನ್ಸ್’ ಫ್ರಾಂಚೈಸಿ ತಂಡವನ್ನು ಖರೀದಿಸಿ ಅದರ ಅಧಿಕೃತ ಮಾಲೀಕರಾಗಿದ್ದಾರೆ. ಆಗಸ್ಟ್ 26 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಡಬ್ಲಿನ್ ಗಾರ್ಡಿಯನ್ಸ್ ತಂಡವನ್ನು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ (Ashwin) ಮುನ್ನಡೆಸಲಿದ್ದಾರೆ.
ಈ ಹಿಂದೆ ಇವರಿಬ್ಬರು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಜೊತೆಯಾಗಿದ್ದರು. ಈಗ ರಾಹುಲ್ ದ್ರಾವಿಡ್ ಹಾಗೂ ಆರ್ ಅಶ್ವಿನ್ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ.
ಯುರೋಪ್ ರಾಷ್ಟ್ರಗಳಲ್ಲಿ ಕ್ರಿಕೆಟ್ ಪ್ರೋತ್ಸಾಹ ನೀಡಲು ಈ ಟೂರ್ನಿಯನ್ನು ಆಯೋಜಿಸಲಾಗಿದೆ. ಐರ್ಲೆಂಡ್ ಹಾಗೂ ಯುರೋಪಿನಾದ್ಯಂತ ಯುವ ಕ್ರಿಕೆಟಿಗರಿಗೆ ಈ ಟೂರ್ನಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

ತಂಡ ಖರೀದಿಸಿದ ನಿರ್ಧಾರದ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್,”ಈ ಟೂರ್ನಿಯತ್ತ ನನ್ನನ್ನು ಆಕರ್ಷಿಸಿದ್ದು, ಅದರ ಹಿಂದಿನ ದೃಷ್ಟಿಕೋನ, ಐರ್ಲೆಂಡ್ ಮತ್ತು ಯುರೋಪಿನಾದ್ಯಂತ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಸೃಷ್ಟಿಸುವ ಮೂಲಕ ಯುರೋಪಿನಲ್ಲಿ ಕ್ರಿಕೆಟ್ ಬೆಳೆಯಲು ಸಹಾಯ ಮಾಡುವುದಾಗಿದೆ” ಎಂದು ಹೇಳಿದರು.“ಡಬ್ಲಿನ್ ತಂಡ ಈಗಾಗಲೇ ಉತ್ಸಾಹಭರಿತ ಕ್ರಿಕೆಟ್ ಆಟಗಾರರನ್ನು ಹೊಂದಿದ್ದು, ಅಗಾಧ ಸಾಮರ್ಥ್ಯ ಹೊಂದಿದೆ. ಮುಂದಿನ ಕ್ರಿಕೆಟ್ ಪೀಳಿಗೆಯನ್ನು ಪೋಷಿಸಿವುದು ಮುಖ್ಯ. ಈ ಪ್ರಯತ್ನದಲ್ಲಿ ಇಟಿಪಿಎಲ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲೀಗ್‌ನಲ್ಲಿ ಒಟ್ಟು 6 ತಂಡಗಳಿದ್ದು (ಡಬ್ಲಿನ್, ಬೆಲ್‌ಫಾಸ್ಟ್, ಎಡಿನ್‌ಬರ್ಗ್, ಗ್ಲಾಸ್ಗೋ, ರೊಟರ್‌ಡ್ಯಾಮ್ ಮತ್ತು ಆಂಸ್ಟರ್ಡ್ಯಾಮ್) ಕ್ರಿಸ್ ಗೇಲ್, ಸ್ಟೀವ್ ವಾ ಮತ್ತು ಜಾಂಟಿ ರೋಡ್ಸ್ ಅವರಂತಹ ಇತರ ಜಾಗತಿಕ ದಿಗ್ಗಜರು ಸಹ ವಿವಿಧ ತಂಡಗಳ ಮಾಲೀಕರಾಗಿ ಹೂಡಿಕೆ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!