ಉದಯವಾಹಿನಿ, ಚಿತ್ರದುರ್ಗ: ಲಸಿಕೆಯಿಂದ ವಂಚಿತರಾಗಿರುವ, ಲಸಿಕೆ ಪಡೆಯದ ಹಾಗೂ ಕಾರಣಾಂತರಗಳಿಂದ ಲಸಿಕೆಯಿಂದ ಬಿಟ್ಟುಹೋದ ಮಕ್ಕಳನ್ನು ಹಾಗೂ ಗರ್ಭಿಣಿಯರನ್ನು ಸಮೀಕ್ಷೆ ಮೂಲಕ ಗುರುತಿಸಿ, ಅವರಿಗೆ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ಮೂರು ಹಂತಗಳಲ್ಲಿ ಏರ್ಪಡಿಸಲಾಗಿದ್ದು, ಲಸಿಕೆ ಪಡೆಯುವುದರ ಮೂಲಕ ಆರೋಗ್ಯಕರ ಮಕ್ಕಳು ಮತ್ತು ಸದೃಢ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಹೇಳಿದರು.
ಬುದ್ಧನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದ್ರಧನುಷ್ ಲಸಿಕಾ ಅಭಿಯಾನ-5.0 ಮೂರು ಹಂತಗಳಲ್ಲಿ ಏರ್ಪಡಿಸಲಾಗಿದ್ದು, ಮೊದಲ ಹಂತದ ಲಸಿಕಾ ಕಾರ್ಯಕ್ರಮ ಆ. 07 ರಿಂದ 12 ರವರೆಗೆ ಜರುಗಲಿದೆ.  ಎಲ್ಲಾ ತಾಯಂದಿರು ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರಗಳಲ್ಲಿನ ಲಸಿಕಾ ಕೇಂದ್ರಗಳಿಗೆ  ಮಕ್ಕಳನ್ನು ಕರೆತಂದು ಲಸಿಕೆಯನ್ನು ಪಡೆದು ಮಕ್ಕಳ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕರಿಸಬೇಕು, 5 ವರ್ಷದವರೆಗೆ ಮಗುವಿಗೆ ಕಾಲ ಕಾಲಕ್ಕೆ ಲಸಿಕೆಯನ್ನು ಹಾಕಿಸಬೇಕು, ಮಾರಕ ರೋಗಗಳನ್ನು ತಡೆಗಟ್ಟಲು ಲಸಿಕೆಗಳು ತುಂಬಾ ಅವಶ್ಯಕವಾಗಿರುವುದರಿಂದ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯಿಂದ 895 ಲಸಿಕಾ ಅಧಿವೇಶನಗಳನ್ನು ಆಯೋಜಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸರ್ವೆ ಮಾಡಿದ್ದು ಇದರಲ್ಲಿ ವಿವಿಧ ಲಸಿಕೆಗಳಿಂದ ಹೊರಗುಳಿದಿರುವ ಗರ್ಭಿಣಿಯರ ಸಂಖ್ಯೆ 900, 2 ವರ್ಷದೊಳಗಿನ ಮಕ್ಕಳ ಸಂಖ್ಯೆ 3418, 2 ರಿಂದ 5 ವರ್ಷದ ಮಕ್ಕಳ ಸಂಖ್ಯೆ 57 ಕಂಡು ಬಂದಿರುತ್ತದೆ, ಈ ಎಲ್ಲರಿಗೂ ಮಿಷನ್ ಇಂದ್ರಧನುಷ್ ಲಸಿಕೆ ಅಭಿಯಾನದ ಮೂಲಕ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಧಿಕಾರಿ ಡಾ.ಆರ್. ರಂಗನಾಥ್ ಮಾತನಾಡಿ ಮನೆ ಮನೆಗೆ ಸಮೀಕ್ಷೆ ಕಾರ್ಯಕ್ರಮವನ್ನು ಈಗಾಗಲೇ ಜಿಲ್ಲಾದ್ಯಂತ ಮಾಡಲಾಗಿದೆ.  ಸಮೀಕ್ಷೆಯಲ್ಲಿ ಲಸಿಕೆ ಬಾಕಿ ಇರುವ ಗರ್ಭಿಣಿಯರು ಮತ್ತು 5.0 ವರ್ಷದ ಮಕ್ಕಳನ್ನು ಗುರುತಿಸಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ.  ಐಇಸಿ ಪ್ರಚಾರ ಸಾಮಗ್ರಿಗಳನ್ನು ಜಿಲ್ಲೆಯಿಂದ ವಿತರಿಸಲಾಗಿದೆ.  ಮಕ್ಕಳಿಗೆ ಲಸಿಕೆ ನೀಡಿದ ನಂತರ ಮಾಹಿತಿಯನ್ನು ಯು-ವಿನ್ ಪೋರ್ಟಲ್ ನಲ್ಲಿ ಫಲಾನುಭವಿಗಳ ಮಾಹಿತಿ ಎಂಟ್ರಿ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ  ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಜಿಲ್ಲಾ ಆರ್‍ಸಿಹೆಚ್  ಅಧಿಕಾರಿ ಡಾ. ರೇಣು ಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ ಗಿರೀಶ್, ತಾಲ್ಲೂಕು ನೋಡಲ್ ಅಧಿಕಾರಿ ಸುಧಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Leave a Reply

Your email address will not be published. Required fields are marked *

error: Content is protected !!