
ಉದಯವಾಹಿನಿ, ಔರಾದ್ : ರೈತರ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ವಿಧಾನಸೌಧದ ಎದುರು ಈಚೇಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಕಾರ್ಯಕರ್ತರು, ಸತತ ಬರಗಾಲ, ಹವಾಮಾನ ವೈಪರೀತ್ಯದಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಅವರ ಸಮಸ್ಯೆ ಪರಿಹಾರಕ್ಕೆ ಸರಕಾರಗಳು ಜಾಣ ಕುರುಡುತನ ಪ್ರದರ್ಶಿಸುತ್ತಿವೆ ಎಂದು ಆರೋಪಿಸಿದರು.ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿವೆ. ಆದ್ದರಿಂದ ಎಕರಿಗೆ 50 ಸಾವಿರ ಪರಿಹಾರ ನೀಡಬೇಕು. ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕುಡಲೇ ಅವುಗಳಿಗೆ ಹಿಡಿದು ಕಾಡುಗಳಿಗೆ ಸೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಸನ್ಮಾನ ಯೋಜನೆ ಮರು ಜಾರಿಗೆ ತರಬೇಕು. ಜಮೀನುಗಳಿಗೆ ಹೋಗಲು ಇರುವ ಕಾಲು ದಾರಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಬೇಕು. ರೈತರಿಗೆ ಜಮೀನುಗಳಿಗೆ ಹೋಗಲು ಸುಗಮ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದರು.
ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಇನ್ನೂ ಸಾಲ ನೀಡುತ್ತಿಲ್ಲ. ಇದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಕುಡಲೇ ಅಧಿಕಾರಿಗಳಿಗೆ ಸೂಚಿಸುವ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಆಗ್ರಹಿಸಿದರು.ಮಾಂಜ್ರಾ ನದಿಯಿಂದ ತಾಲೂಕಿನ ಎಲ್ಲ ಕೆರೆಗಳು ತುಂಬಿಸವ ಯೋಜನೆ ಜಾರಿಮಾಡಬೇಕು. ವಿದ್ಯುತ್ ಸಮಸ್ಯೆ ಬಹೆಗರಿಸಲು ಔರಾದ್ -ಬೀದರ್ ರಸ್ತೆಯಲ್ಲಿರುವ ಕೌಡಗಾಂವ ಗ್ರಾಮದ ಬಳಿಯಲ್ಲಿ 33 ಕೆವಿ ಸ್ಟೇಷನ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ತಾಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ಕಮಲನಗರ ತಾಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ, ಕಲ್ಲಪ್ಪ ದೇಶಮುಖ, ವಿಠ್ಠಲ್ ರಾವ ಪಾಟೀಲ್, ಮನೋಹರರಾವ ಹೊರಂಡಿ, ಉತ್ತಮರಾವ ಮಾನೆ, ರಾಜಕುಮಾರ ಪಾಟೀಲ್, ಝರಣೆಪ್ಪ ದೇಶಮುಖ, ಹಣಮಂತ ಬೋರಾಳ, ವಿಶ್ವನಾಥ ಧರಣೆ ಸೇರಿದಂತೆ ಅನೇಕರಿದ್ದರು.
