ಉದಯವಾಹಿನಿ, ನವದೆಹಲಿ: ಬೆಲೆ ಏರಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ರಾಜ್ಯಸಭೆಗೆ ಟೊಮೆಟೊ ಹಾಗೂ ಶುಂಠಿಯ ಹಾರವನ್ನು ಧರಿಸಿ ಬಂದರು. ಆದರೆ ಅವರ ಈ ವರ್ತನೆಗೆ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು ತೀವ್ರ ಆಕ್ಷೇಪ ವ್ಯಕ್ತಡಿಸಿದರಲ್ಲದೆ, ಇದರಿಂದ ಭಾರಿ ನೋವುಂಟಾಗಿದೆ ಎಂದು ನುಡಿದರು.
ರಾಜ್ಯಸಭೆಯಲ್ಲಿ ಕೆಲವು ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಅವರು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಪ್ರವೇಶಿಸಿದರು.
ಕಲಾಪ ನಡೆಸುವ ವೇಳೆ ಕ್ವಿಟ್ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ ಜಗದೀಪ್ ಧನಕರ್ ಅವರು, ಎರಡು ನಿಮಿಷ ಮೌನಾಚರಣೆ ಮಾಡುವಂತೆ ಸದಸ್ಯರಿಗೆ ಸೂಚಿಸಿದರು. ಇದಾಗ ಬಳಿಕ ಅಧಿಕೃತ ದಾಖಲೆಗಳನ್ನು ಮಂಡಿಸಲಾಯಿತು.
ಈ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮುಂಬೈನಲ್ಲಿ ಕ್ವಿಟ್ ಇಂಡಿಯಾ ಸಮಾರಂಭದಲ್ಲಿ ಭಾಗಿಯಾಗಲು ಹೊರಟಿದ್ದ ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಅವರ ಬಂಧನದ ಬಗ್ಗೆ ಉಲ್ಲೇಖಿಸಿದರು.
