
ಉದಯವಾಹಿನಿ,ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಐದು ವರ್ಷಗಳವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಪಾಕಿಸ್ತಾನ ಚುನಾವಣಾ ಆಯೋಗ ನಿರ್ಬಂಧಿಸಿದೆ. ಪ್ರಧಾನಿಯಾಗಿದ್ದಾಗ ವಿದೇಶಿ ಗಣ್ಯರಿಂದ ಉಡುಗೊರೆಯಾಗಿ ಪಡೆದಿದ್ದ ದುಬಾರಿ ವಸ್ತುಗಳನ್ನು ಸರ್ಕಾರಿ ಅಧಿಕಾರಿಗಳಿಗೆ ಮಾರಾಟ ಮಾಡಿದ್ದ ಆರೋಪ ಇಮ್ರಾಖ್ ಖಾನ್ ವಿರುದ್ಧ ಕೇಳಿಬಂದಿತ್ತು.
ಈ (ತೊಶಖಾನ ಭ್ರಷ್ಟಾಚಾರ) ಪ್ರಕರಣದ ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್ ಆದೇಶವನ್ನು ಪರಿಗಣಿಸಿ ಸಂವಿಧಾನದ 63 (1)(ಎಚ್) ವಿಧಿ ಹಾಗೂ 2017ರ ಚುನಾವಣಾ ಕಾಯ್ದೆಯ 232ನೇ ಸೆಕ್ಷನ್ ಅನ್ವಯ ಇಮ್ರಾನ್ ಖಾನ್ ಅವರನ್ನು ಐದು ವರ್ಷಗಳವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೆ ಬಿಡುಗಡೆ ಮಾಡಿದೆ.
