ಉದಯವಾಹಿನಿ ನಾಗಮಂಗಲ: ಕಾಲೇಜಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸುವ ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ಕಾಲೇಜಿನ ಅಭಿವೃದ್ಧಿಯ ಚಿತ್ರಣವೇ ಬದಲಾಗುವಂತೆ ಕ್ರಮವಹಿಸುತ್ತೇನೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಸ.ಪ.ಪೂ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೌಢಶಾಲಾ ಮತ್ತು ಕಾಲೇಜಿನ ಅಮೃತ ಮತ್ತು ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ನಾನು ಶಾಸಕನಾಗಿದ್ದಾಗ ಮೇಲಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಿಸಿದ್ದೆ. ನಂತರ ನಾನು ಅಧಿಕಾರದಲ್ಲಿಲ್ಲದ ಹತ್ತು ವರ್ಷದ ಅವಧಿಯಲ್ಲಿ ಕಾಲೇಜಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಆ ನಿಟ್ಟಿನಲ್ಲಿ ಈಗಾಗಲೇ ಕಾಲೇಜು ಅಭಿವೃದ್ಧಿಗೆ 40 ಲಕ್ಷ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದು, ಅದನ್ನು ಒದಗಿಸುವ ಜವಾಬ್ದಾರಿ ನನ್ನದು. ಅಲ್ಲದೇ ಕಾಲೇಜಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಾದ ಸಭಾಂಗಣದ ಮಾದರಿಯ ವಿಶಾಲವಾದ ಚಾವಣಿ ಮತ್ತು ನೆಲಹಾಸು ನಿರ್ಮಿಸಲು ಅಗತ್ಯವಾಗಿ ಕ್ರಮವಹಿಸುತ್ತೇನೆ. ಅಲ್ಲದೇ ಕಾಲೇಜಿಗೆ ಏನೆಲ್ಲಾ ಸೌಲಭ್ಯಗಳು ಬೇಕು ಮತ್ತು ಕಾಲೇಜಿನ ಉಪನ್ಯಾಸಕರು ಕಾಲೇಜಿನಲ್ಲಿ ಏನೆಲ್ಲಾ ಕೆಲಸಗಳಾಗಬೇಕು ಎಂದು ಬಯಸುತ್ತೀರೋ ಆ ಕೆಲಸಗಳನ್ನು ನಾನು ಐದು ವರ್ಷಗಳಲ್ಲಿ ಮಾಡುತ್ತೇನೆ. ಜೊತೆಗೆ ಕಾಲೇಜಿನಲ್ಲಿ ಮುಂದಿನ 25 ವರ್ಷ ಯಾವುದೇ ಸೌಲಭ್ಯಗಳನ್ನು ಕೇಳದಂತೆ ಅಭಿವೃದ್ಧಿ ಮಾಡಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ಅಲ್ಲದೇ ನಾನು ಹಂತಹಂತವಾಗಿ ಅಭಿವೃದ್ಧಿ ಮಾಡುವ ಜೊತೆಗೆ ಉಪನ್ಯಾಸಕರಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಕೇಳಿಕೊಳ್ಳುವುದು ಕಾಲೇಜಿನಲ್ಲಿ ಉತ್ತಮ ಫಲಿತಾಂಶವನ್ನು ಮಾತ್ರ. ಜೊತೆಗೆ ಈ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನನ್ನ ಆಶಯವಾಗಿದೆ. ವಿದ್ಯಾರ್ಥಿಗಳು ಕೇವಲ ಶೇ99 ರಷ್ಟು ಅಂಕ ಪಡೆದು ಎಂಜಿನಿಯರ್, ಡಾಕ್ಟರ್ ಆಗುವುದು ಮಾತ್ರ ಮುಖ್ಯವಲ್ಲ. ಬದಲಿಗೆ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಿ ರೂಪಗೊಳ್ಳುವ ಜೊತೆಗೆ ಸಂಸ್ಕಾರವಂತರಾಗಬೇಕು. ಅಲ್ಲದೇ ವಿದ್ಯಾರ್ಥಿಗಳು ಜನ್ಮಕೊಟ್ಟ ತಂದೆತಾಯಿಗಳನ್ನು ಗೌರವಿಸುವ, ದೇಶವನ್ನು ಪ್ರೀತಿಸುವ ದೇಶಾಭಿಮಾನ ಮತ್ತು ನಮ್ಮ ಊರು, ತಾಲ್ಲೂಕು, ಓದಿದ ಕಾಲೇಜನ್ನು ಹೌರವದಿಂದ ಕಾಣುವ ಸುಸಂಸ್ಕೃತರಾಗಿ ಬೆಳೆಯಬೇಕು. ಆ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದರು.
ನಂತರ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ಧನಂಜಯ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಸಚಿವರಲ್ಲಿ ಕಾಲೇಜು ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವಂತೆ ಮನವಿಯನ್ನು ಮಾಡಿದರು. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮವಹಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ಕಲಾ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಆರ್.ರುದ್ರೇಶ್, ಪಿ.ಕೆ.ನಿಸರ್ಗ ಮತ್ತು ರಷಾ ಅವರನ್ನು ಸಚಿವರು ನೆನಪಿನ‌ ಕಾಣಿಕೆ ನೀಡಿ ಗೌರವಿಸಿದರು. ಜೊತೆಗೆ ಪ್ರೌಢಶಾಲೆ ವಿಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಣ್ಮನ ಸೆಳೆದ ವಿದ್ಯಾರ್ಥಿಗಳ ಕಲಾತಂಡಗಳ ಪ್ರದರ್ಶನ
ಅಮೃತ ಮತ್ತು ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಜನಪದ ಕಲೆಗಳಾದ ವೀರಗಾಸೆ, ಪಟದ ಕುಣಿತ, ಸೋಮನ ಕುಣಿತ, ಪೂಜಾ ಕುಣಿತ ಸೇರಿದಂತೆ ತಮಟೆ ತಂಡಗಳನ್ನು ಸಿದ್ಧಪಡಿಸಿಕೊಂಡು ಪಟ್ಟಣದ ಹೆದ್ದಾರಿಯಲ್ಲಿ ಆಯೋಜಿಸಿದ್ದ ಮೆರವಣಿಗೆ ಪ್ರದರ್ಶನ ನೀಡಿದ್ದು, ಸಾರ್ವಜನಿಕರ ಕಣ್ಮನ ಸೆಳೆಯಿತು. ಅಲ್ಲದೇ ಅಮೃತ ಮತ್ತು ಸುವರ್ಣ ಮಹೋತ್ಸವದ ಲಾಂಛನವನ್ನು ತೆರೆದ ವಾಹನದಲ್ಲಿರಿಸಿ ಪೂರ್ಣಕುಂಭದೊಂದಿಗೆ ಮೆರವಣಿಗೆ ಮಾಡಿದ್ದು, ವಿಶೇಷವಾಗಿತ್ತು. ಅಲ್ಲದೇ ಉದ್ಘಾಟನಾ ಸಮಾರಂಭದ ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಉಮೇಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ್, ಬಿಇಒ ಸುರೇಶ್, ತಾ.ಪಂ ಇಒ ಚಂದ್ರಮೌಳಿ, ಕಾಲೇಜಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ಧನಂಜಯ್, ಸಿಪಿಐ ನಿರಂಜನ್, ಪ್ರಾಂಶುಪಾಲ ಎಂ.ಶಿವಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ‌.ವೈ.ಮಂಜುನಾಥ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಇದ್ದರು.

Leave a Reply

Your email address will not be published. Required fields are marked *

error: Content is protected !!