
ಉದಯವಾಹಿನಿ ಕೆ.ಆರ್.ಪೇಟೆ: ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಿಗೂ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶುದ್ದ ಕುಡಿಯುವ ನೀರಿನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ನೀರು ಜೀವಜಲವಾಗಿದ್ದು ಪ್ರತಿಯೊಬ್ಬ ಮಾನವನಿಗೆ ಹಾಗೂ ಪ್ರಾಣಿಗಳಿಗೆ ಅವಶ್ಯಕವಾಗಿ ಬೇಕಾಗಿದೆ. ಉತ್ತಮ ಆರೋಗ್ಯ ದೊರೆಯಬೇಕಾದರೆ ಶುದ್ದ ಕುಡಿಯುವ ನೀರು ಅಗತ್ಯವಿದೆ. ಇತ್ತೀಚಿಗೆ ಕಲುಷಿತ ನೀರನ್ನು ಕುಡಿದು ೫-೬ ಜನ ಮೃತಪಟ್ಟಿರುವುದನ್ನು ನಾವು ನೋಡಿದ್ದೇವೆ. ಅಂಥಹ ಘಟನೆಗಳು ಮರುಕಳಿಸಬಾರದು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಶುದ್ದ ನೀರನ್ನು ಪೂರೈಸುವ ಜಲಜೀವನ್ ಮಿಷನ್ ಕಾಮಗಾರಿಯನ್ನು ಗ್ರಾಮಕ್ಕೆ ಒದಗಿಸಲಾಗಿದೆ ಎಂದರು.ಭೂಮಿಪೂಜೆ ಕಾರ್ಯಕ್ರಮದಲ್ಲಿ ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಆದ್ಯಕ್ಷ ಬೋರೇಗೌಡ, ನ್ಯಾಯಬೆಲೆ ಅಂಗಡಿ ಕುಮಾರ್, ಗುತ್ತಿಗೆದಾರರಾದ ಪುಟ್ಟೇಗೌಡ, ಆರ್.ಬಿ.ಪ್ರಕಾಶ್,ಗ್ರಾಮ ಪಂಚಾಯತಿ ಸದಸ್ಯ ಹೇಮೇಶ್, ಆರ್.ಬಿ.ಹರೀಶ್, ಮಹೇಶ್, ಸುರೇಶ್, ರಾಜು, ಬೋರೇಗೌಡ ಸೇರಿದಂತೆ ಹಲವರಿದ್ದರು.
