ಉದಯವಾಹಿನಿ, ನ್ಯೂಜಿಲೆಂಡ್ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತ ತಂಡದ ಯುವ ವೇಗಿ ಅರ್ಷದೀಪ್ ಸಿಂಗ್‌ಗೆ ಐಸಿಸಿ ಪಂದ್ಯದ ಸಂಭಾವನೆಯಲ್ಲಿ ಶೇ 15 ರಷ್ಟು ದಂಡವನ್ನು ವಿಧಿಸಿದೆ. ಅರ್ಷದೀಪ್ ಸಿಂಗ್ ಅವರು ಕಿವೀಸ್ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುತ್ತಿದ್ದ ಡ್ಯಾರಿಲ್ ಮಿಚೆಲ್ ಅವರ ಮೇಲೆ ಅನಗತ್ಯವಾಗಿ ಚೆಂಡಿನಿಂದ ಥ್ರೋ ಮಾಡಿದ್ದರು. ಆ ಮೂಲಕ ಐಸಿಸಿ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಇದನ್ನು ಗಮನಿಸಿದ ಐಸಿಸಿ ಯುವ ವೇಗಿಗೆ ದಂಡವನ್ನು ವಿಧಿಸಿದೆ.
ಮಾರ್ಚ್ 10ರಂದು ಮಂಗಳವಾರ ಐಸಿಸಿ ತನ್ನ ನಿರ್ಧಾರವನ್ನು ಪ್ರಕಟಿಸಿತು. ಐಸಿಸಿ ನಡವಳಿಕೆ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ಅರ್ಷದೀಪ್‌ಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ. ಆಟಗಾರರು ಹಾಗೂ ಆಟಗಾರರ ಬೆಂಬಲ ಸಿಬ್ಬಂದಿಗೆ ಸಂಬಂಧಿಸಿದ ಐಸಿಸಿ ನಡವಳಿಕೆ ಸಂಹಿತೆಯ ವಿಧಿ 2.9 ಅನ್ನು ಅರ್ಷದೀಪ್ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ವಿಧಿಯ ಪ್ರಕಾರ, ಅಂತಾರಾಷ್ಟ್ರೀಯ ಟೂರ್ನಿಯ ಪಂದ್ಯದ ವೇಳೆ ಆಟಗಾರನ ಕಡೆಗೆ ಅಥವಾ ಅವರ ಸಮೀಪಕ್ಕೆ ಚೆಂಡನ್ನು (ಅಥವಾ ಕ್ರಿಕೆಟ್ ಉಪಕರಣದ ಯಾವುದೇ ವಸ್ತುವನ್ನು) ಅಸಮರ್ಪಕ ಅಥವಾ ಅಪಾಯಕಾರಿಯಾದ ರೀತಿಯಲ್ಲಿ ಎಸೆಯಬಾರದು.
