
ನೇಪಾಳ, ಉದಯವಾಹಿನಿ : ಒಂದೂವರೆ ತಿಂಗಳ ಹಿಂದೆ ಕಠ್ಮಂಡುವಿನಲ್ಲಿ ಟೊಮೆಟೊ ಕೆ.ಜಿಗೆ 10 ರೂ. ಬೆಲೆಯೂ ಇರಲಿಲ್ಲ. ಅಲ್ಲಿನ ರೈತರು ಸುಮಾರು 60,000 ರಿಂದ 70,000 ಕೆಜಿ ಟೊಮೆಟೊಗಳನ್ನು ರಸ್ತೆಗೆ ಸುರಿದಿದ್ದರು. ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಕೆ.ಜಿಗೆ 242 ರೂ.ವರೆಗೂ ಮಾರಾಟವಾಗುತ್ತಿದೆ. ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದೆ, ದೇಶವು ಟೊಮೆಟೊ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ, ಭಾರತಕ್ಕೆ ಟೊಮೆಟೊ ಪೂರೈಸಲು ನೇಪಾಳ ಸಿದ್ದವಾಗಿದೆ. ಆದರೆ, ಮಾರುಕಟ್ಟೆ ಮತ್ತು ಇತರ ಅಗತ್ಯ ಸೌಲಭ್ಯಗಳಿಗೆ ಸುಲಭ ಪ್ರವೇಶವನ್ನು ಬಯಸುತ್ತಿದೆ. ಭಾರತ ಕೂಡ ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ತಿಳಿಸಿದ್ದಾರೆ.“ಈಗಾಗಲೇ ನೇಪಾಳದಿಂದ ಭಾರತಕ್ಕೆ ಟೊಮೆಟೊ ರಫ್ತಾಗುತ್ತಿದೆ. ಅದನ್ನು ಧೀರ್ಘಾವಧಿಗೆ ವಿಸ್ತರಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲು ನೇಪಾಳ ಇಚ್ಚಿಸಿದೆ. ಅದಕ್ಕಾಗಿ, ಭಾರತದ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸಲು ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ನೇಪಾಳ ಬೇಡಿಕೆ ಇಟ್ಟಿದೆ” ಎಂದು ಕೃಷಿ ಸಚಿವಾಲಯದ ವಕ್ತಾರ ಶಬ್ನಮ್ ಶಿವಕೋಟಿ ಹೇಳಿದ್ದಾರೆ.“ನೇಪಾಳದ ಕಠ್ಮಂಡು ಕಣಿವೆಯ ಮೂರು ಜಿಲ್ಲೆಗಳಾದ ಕಠ್ಮಂಡು, ಲಲಿತ್‌ಪುರ್ ಮತ್ತು ಭಕ್ತಾಪುರದಲ್ಲಿ ಹೇರಳವಾಗಿ ಟೊಮೆಟೊಗಳನ್ನು ಬೆಳೆಯಲಾಗುತ್ತದೆ. ಆ ಟೊಮೆಟೊಗಳಲ್ಲಿ ಬಹುಪಾಲನ್ನು ಭಾರತಕ್ಕೆ ರಫ್ತು ಮಾಡಲು ನೇಪಾಳ ಸಿದ್ದವಾಗಿದೆ” ಎಂದು ಕಠ್ಮಂಡುವಿನ ತರಕಾರಿ ಮಾರುಕಟ್ಟೆ ಅಭಿವೃದ್ಧಿ ಮಂಡಳಿಯ ಉಪ ನಿರ್ದೇಶಕಿ ಬಿನಯಾ ಶ್ರೇಷ್ಠಾ ತಿಳಿಸಿದ್ದಾರೆ.ಒಂದೂವರೆ ತಿಂಗಳ ಹಿಂದೆ, ನೇಪಾಳದ ರೈತರು ತಾವು ಬೆಳೆದ ಟೊಮೆಟೊಗಳಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದರು. ಕಠ್ಮಂಡುವಿನಲ್ಲಿ ಟೊಮೆಟೊ ಕೆ.ಜಿಗೆ 10 ರೂ. ಬೆಲೆಯೂ ಇರಲಿಲ್ಲ. ಬೆಲೆ ಇಳಿಕೆಯಿಂದಾಗಿ ಸುಮಾರು 60,000 ರಿಂದ 70,000 ಕೆಜಿ ಟೊಮೆಟೊಗಳನ್ನು ಕಠ್ಮಂಡುವಿನ ತರಕಾರಿ ಮಾರುಕಟ್ಟೆ ಬಳಿಯ ರಸ್ತೆಗಳಲ್ಲಿ ಸುರಿದಿದ್ದರು ಎಂದು ಹೇಳಲಾಗಿದೆ.
