ಉದಯವಾಹಿನಿ, ಬೆಂಗಳೂರು: -ಕಾಂಗ್ರೆಸ್, ಜೆಡಿಎಸ್ ತೊರೆದು ಹೋಗಿದ್ದ ಹಲವು ಪ್ರಮುಖ ಶಾಸಕರು ಮತ್ತೆ ಆಡಳಿತರೂಢ ಕಾಂಗ್ರೆಸ್‍ನತ್ತ ಮುಖ ಮಾಡಿದ್ದು, ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳಿನಲ್ಲಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕೈ ಪಾಳೆಯದಲ್ಲಿ ತೀವ್ರ ಆಕ್ಷೇಪ ಅಸಮಾಧಾನಗಳು ಕೇಳಿಬರುತ್ತಿವೆ.ಅಧಿಕಾರಕ್ಕಾಗಿ ಪಕ್ಷ ಸಿದ್ದಾಂತಗಳನ್ನು ಮರೆತು ಸ್ವಾರ್ಥ ರಾಜಕಾರಣ ಮಾಡುವವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಇದರಿಂದ ಪಕ್ಷ ನಿಷ್ಠರಿಗೆ ಅಪಮಾನ ಮಾಡಿದಂತಾಗುತ್ತದೆ. ಅವಕಾಶ ತಪ್ಪುತ್ತದೆ ಎಂಬ ಆಕ್ಷೇಪ ವ್ಯಾಪಕವಾಗಿದೆ. ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 17 ಮಂದಿ ಶಾಸಕರ ಪೈಕಿ ಬೆಂಗಳೂರಿನ ಮೂವರು, ಕರಾವಳಿ ಭಾಗದ ಒಬ್ಬರು ಕಾಂಗ್ರೆಸ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಇದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಖಚಿತಪಡಿಸಿದ್ದಾರೆ. ಇಷ್ಟೇ ಅಲ್ಲದೆ ಬಿಜೆಪಿಯಲ್ಲಿ ಮತ್ತಷ್ಟು ಅತೃಪ್ತ ಶಾಸಕರು ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಹೆಚ್ಚು ಸ್ಥಾನ ಗೆಲ್ಲುವ ಗುರಿಯೊಂದಿಗೆ ಕಾರ್ಯಾಚರಣೆಗಿಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಲಸಿಗರ ಘರ್ ವಾಪಸ್ಸಾಗಿ ಹಸಿರುನಿಶಾಸನೆ ತೋರಿಸಿದ್ದಾರೆ.
