
ಉದಯವಾಹಿನಿ,ಮಸ್ಕಿ: ಸ್ಥಳೀಯರ ಆದಾಯಕ್ಕೆ ನೆರವಾಗುವಂತೆ ನರೇಗಾದಡಿ ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ರಾಯಚೂರು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಪ್ರಕಾಶ್ ವಿ. ಸಲಹೆ ನೀಡಿದರು. ತಾಲೂಕಿನ ಅಂಕುಶದೊಡ್ಡಿ ಗ್ರಾಪಂಯಲ್ಲಿ ನರೇಗಾದಡಿ ಹೂಳು ಎತ್ತಿದ ಸಾನಬಾಳ ಕೆರೆ ಮತ್ತು ಹೂವಿನಬಾವಿ ಗುಡ್ಡದಲ್ಲಿ ನಿರ್ಮಿಸಿದ ಟಿಸಿಬಿ (ಟ್ರಂಚ್ ಕಾಮ್ ಬಾಂಡ್) ಗಳನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು. ಕೂಲಿಕಾರ್ಮಿಕರ ಬೇಡಿಕೆ ಅನುಸಾರ ಅಲ್ಲಲ್ಲಿ ಕೆಲಸ ನೀಡುವ ಬದಲು ಒಂದು ಕಡೆ ನೀರು ನಿಲ್ಲುವಂತೆ ಕೆರೆ ನಿರ್ಮಿಸಿದರೆ, ಕೆರೆ ಸುತ್ತಲಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ರೈತರು ಕೃಷಿ ಜೊತೆಗೆ ಉಪ ಕಸಬು ಕೈಗೊಳ್ಳಬಹುದು ಎಂದರು. ಹೂವಿನಬಾವಿ ಗುಡ್ಡದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿಗೆ ಬೋರ್‌ವೆಲ್ ಅಗತ್ಯವಿದ್ದು, ಗ್ರಾಪಂಯಿಂದ ಕೊರೆಸಿ, ಹಸ್ತಾಂತರಿಸಬೇಕು. ಸುತ್ತಲಿನ ಗುಡ್ಡಗಳಲ್ಲಿ ಅರಣ್ಯೀಕರಣಕ್ಕೆ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಹಳ್ಳಿಗಳಲ್ಲಿ ಕಸ ಸಂಗ್ರಹಣೆಗೆ ಸ್ವ ಸಹಾಯ ಗುಂಪಿನ ಮಹಿಳೆಯರನ್ನು ನಿಯೋಜಿಸಿದ್ದು, ವಾಹನಗಳ ನಿರ್ವಹಣೆಗೆ ಗಮನಹರಿಸಬೇಕು ಎಂದು ಸೂಚಿಸಿದರು. ಈ ವೇಳೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಉಮೇಶ್, ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರೆಡ್ಡಿ, ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ಅನಿಷಾ, ಆಂಜನೇಯಲು, ಜಿಲ್ಲಾ ಅಂತರ್ಜಲ ಮಂಡಳಿಯ ಭೂ ವಿಜ್ಞಾನಿ ಕೃಷ್ಣ, ಜಿಪಂ ಸಿಬ್ಬಂದಿ ಜಗದೀಶ್, ಅಂಕುಶದೊಡ್ಡಿ ಗ್ರಾಪಂ ಪಿಡಿಒ ನಾಗೇಶ್, ತಾಂತ್ರಿಕ ಸಹಾಯಕ ಅಭಿಯಂತರ ಪಂಪಣ್ಣ, ಗ್ರಾಪಂ ಸಿಬ್ಬಂದಿ ಇದ್ದರು.
