
ಉದಯವಾಹಿನಿ, ಬಂಗಾರಪೇಟೆ: ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ 26 ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸುವ ಏಕೈಕ ಗುರಿ ನನ್ನದಾಗಿದ್ದು ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕರೆಯಲಾಗಿದ್ದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್ ದೀಪ, ಸಂಪರ್ಕ ರಸ್ತೆ, ನಿವೇಶನ ರೈತರಿಗೆ ನಿವೇಶನ ಕೊಡಬೇಕೆಂಬ ಕನಸನ್ನು ಹೊಂದಿದ್ದು, ಅನೇಕ ನಿಯಮಗಳನ್ನು ಜಾರಿಗೆ ತರಲಾಗಿದೆ, ಅದನ್ನು ಸಕಾರಾತ್ಮಕವಾಗಿ ಈಡೇರಿಸಲು ಅಧಿಕಾರಿ ವರ್ಗ ಅತ್ಯಂತ ಕಾರ್ಯಕ್ಷಮತೆಯಿಂದ ದುಡಿಯಬೇಕು ಎಂದರು.ಅಧಿಕಾರಿಗಳಿಗೆ ಅಭಿವೃದ್ಧಿ ವಿಚಾರದಲ್ಲಿ ಅಸಡ್ಡೆ ತೋರಿದಂತೆ, ಅಕ್ರಮ ನಿವೇಶನಗಳಿಗೆ ಖಾತೆ ಮಾಡದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ಅಧಿಕಾರ ವರ್ಗ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ನನ್ನ ಕ್ಷೇತ್ರದಿಂದ ವರ್ಗಾವಣೆ ಮಾಡಿಕೊಂಡು ಹೊರ ನಡೆಯಬೇಕೆಂದು ಎಚ್ಚರಿಕೆ ನೀಡಿದರು.ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ರವಿಕುಮಾರ್. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಪಿ. ನಾರಾಯಣಪ್ಪ ಭಾಸ್ಕರ್ ಮಧು ಚಿತ್ರ ಶಂಕರ್ ವಸಂತ್ ವಾಣಿ. ಶಂಕರ್. ಸರಸ್ವತಿ. ಹಾಗೂ ಅನೇಕ ಪಿಡಿಓಗಳು ಉಪಸ್ಥಿತರಿದ್ದರು.
