ಉದಯವಾಹಿನಿ, ನವದೆಹಲಿ: ಧಾರಾಕಾರ ಮಳೆಯಿಂದ ತತ್ತರಿಸಿರುವ ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ಮಳೆಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಭಾರೀ ಭೂಕುಸಿತದಿಂದಾಗಿ ಉತ್ತರ ಭಾರತದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಈ ಅನಾಹುತದಿಂದ ಚೇತರಿಸಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಮಳೆ ಬೀಳುವ ಕುರಿತು ಇಲಾಖೆ ಮುನ್ಸೂಚನೆ ನೀಡಿರುವುದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಹಿಮಾಚಲ ಪ್ರದೇಶ ರಾಜ್ಯವು ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದ್ದು, ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ ಇದುವರೆಗೆ ೭೮ ಕ್ಕೆ ಏರಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದು, ತೀವ್ರ ಶೋಧ ನಡೆಯುತ್ತಿದೆ.
ಏತನ್ಮಧ್ಯೆ, ಮುಂಬರುವ ವಾರದಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಅಲ್ಲಿನ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಹಿಮಾಚಲ ಪ್ರದೇಶದ ೧೦ ಜಿಲ್ಲೆಗಳಲ್ಲಿ ಆಗಸ್ಟ್ ೨೧ ಮತ್ತು ೨೨ ರಂದು ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹವಾಮಾನ ಇಲಾಖೆ ಆ ಪ್ರದೇಶಗಳಲ್ಲಿ ಹಳದಿ ಎಚ್ಚರಿಕೆಯನ್ನು ಘೋಷಿಸಿದೆ. ಮುಂದಿನ ೪೮ ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ರಾಜಸ್ಥಾನದಲ್ಲಿ ಹವಾಮಾನ ಇಲಾಖೆ ವರದಿಯ ಪ್ರಕಾರ, ಮಾನ್ಸೂನ್ ದುರ್ಬಲಗೊಂಡಿರುವುದರಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿಲ್ಲ, ಆದರೆ ಚಂಡಮಾರುತದ ಪರಿಚಲನೆಯಿಂದಾಗಿ ರಾಜ್ಯದ ಹವಾಮಾನದಲ್ಲಿ ಬದಲಾವಣೆಯಾಗಿದೆ. ಸಿಕರ್ ಜಿಲ್ಲೆಯಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!