ಉದಯವಾಹಿನಿ, ಕೃಷ್ಣಗಿರಿ : ಪತಿಯ ಯೂಟ್ಯೂಬ್ ಜ್ಞಾನ ಪತ್ನಿಯ ಜೀವವನ್ನು ಬಲಿತೆಗೆದುಕೊಂಡಿರುವ ಘಟನೆ ತಮಿಳುನಾಡಿನಲ್ಲಿ ಜರುಗಿದೆ.
ಯೂಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಿಸಿ ಪತ್ನಿಯ ಹೆರಿಗೆ ಮಾಡಿಸುವ ಪತಿಯ ಪ್ರಯತ್ನವು ಪತ್ನಿಯ ಸಾವಿನಲ್ಲಿ ಕೊನೆಗೊಂಡ ದಾರುಣ ಘಟನೆ ಸಂಭವಿಸಿದೆ.
ಹೆರಿಗೆ ನಂತರ ತೀವ್ರ ರಕ್ತಸ್ರಾವವಾಗಿ ಪತ್ನಿ ಸಾವನ್ನಪ್ಪಿದ್ದಾಳೆ. ಸಹಜ ಹೆರಿಗೆಯಾಗಬೇಕೆಂಬ ಪತಿ-ಪತ್ನಿಯರ ಆಸೆ ದುರಂತದಲ್ಲಿ ಅಂತ್ಯವಾಗಿದೆ .
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹನುಮಂತಪುರಂನ ಮಾದೇಶ್ (೨೭) ಎರಡು ವರ್ಷಗಳ ಹಿಂದೆ ಪೊಚ್ಚಂಪಲ್ಲಿ ಸಮೀಪದ ಪುಲಿಯಂಬಟ್ಟಿಯ ವೇದ್ಯಪ್ಪನ ಮಗಳು ಲೋಕನಾಯಕಿ (೨೭) ಅವರನ್ನು ವಿವಾಹವಾಗಿದ್ದರು .ಕೃಷಿ ಕೋರ್ಸ್‌ನಲ್ಲಿ ಪದವಿ ಪಡೆದಿರುವ ಇಬ್ಬರೂ ತಮ್ಮ ಹೊಲದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗಳನ್ನು ಬೆಳೆಯುತ್ತಿದ್ದರು.
ಆದ್ದರಿಂದ, ಅವರು ನೈಸರ್ಗಿಕವಾಗಿ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದರು. ಅದರಿಂದ ಮಾದೇಶ್ ಯೂಟ್ಯೂಬ್ ನಲ್ಲಿ ವೀಡಿಯೋ ನೋಡಿ ಹೆರಿಗೆ ಮಾಡಿಸುವ ಬಗ್ಗೆ ಸಾಕಷ್ಟು ಜ್ಞಾನ ಹೆಚ್ಚಿಸಿಕೊಂಡಿದ್ದ. ಮಂಗಳವಾರ ಲೋಕನಾಯಕಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮಾದೇಶ್ ತನ್ನ ಯೂಟ್ಯೂಬ್ ಜ್ಞಾನದಿಂದ ಆಕೆಗೆ ಹೆರಿಗೆ ಮಾಡಿಸಲು ಮುಂದಾಗಿದ್ದಾನೆ. ಮಗುವಿಗೆ ಜನ್ಮ ನೀಡಿದ ಲೋಕನಾಯಕಿ ನಂತರ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದು ತಕ್ಷಣ ಮಾದೇಶ್ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!