
ಉದಯವಾಹಿನಿ, ಭಂಡಾರಾ : ವಿಷಪೂರಿತ ಆಹಾರ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪೂರ್ವ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಆಶ್ರಮ ಶಾಲೆಯ ಮೂವತ್ತು ವಿದ್ಯಾರ್ಥಿಗಳನ್ನು ಶಂಕಿತ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತುಮ್ಸಾರ್ ಪಟ್ಟಣದ ಯೆರಾಲಿ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆಶ್ರಮ ಶಾಲೆಯ ಕೆಲವು ವಿದ್ಯಾರ್ಥಿಗಳು ವಾಂತಿ, ಹೊಟ್ಟೆ ನೋವು ಮತ್ತು ಜ್ವರದ ಬಗ್ಗೆ ದೂರು ನೀಡಿದ್ದು, ನಂತರ ಜಿಲ್ಲೆ ಆರೋಗ್ಯ ಇಲಾಖೆಯ ತಂಡವು ಶಾಲೆಯ ಹಾಸ್ಟೆಲ್‍ನಲ್ಲಿ ವಾಸಿಸುವ 325 ವಿದ್ಯಾರ್ಥಿಗಳನ್ನು ಪರೀಕ್ಷಿಸಿದೆ ಎಂದು ಭಂಡಾರ ಜಿಲ್ಲೆ ಆರೋಗ್ಯ ಅಧಿಕಾರಿ ಮಿಲಿಂದ್ ಸೋಮಕುವಾರ್ ತಿಳಿಸಿದರು.
ಅವರಲ್ಲಿ 30 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ತುಮ್ಸಾರ್‍ನಲ್ಲಿರುವ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಹಾಸ್ಟೆಲ್‍ನಲ್ಲಿ ನೀಡಲಾದ ಆಹಾರ ಸೇವಿಸಿದ ನಂತರ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರಿಂದ ಇದು ವಿಷಪೂರಿತ ಪ್ರಕರಣ ಎಂದು ನಾವು ಶಂಕಿಸಿದ್ದೇವೆ, ಎಲ್ಲಾ ವಿದ್ಯಾರ್ಥಿಗಳು ಈಗ ಸ್ಥಿರವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.ಆರೋಗ್ಯ ಇಲಾಖೆಯು ಆಹಾರ ಮತ್ತು ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದೆ ಎಂದು ಸೋಮಕುವಾರ್ ಹೇಳಿದರು. ಆಶ್ರಮ ಶಾಲೆಗಳು ಬುಡಕಟ್ಟು ಸಮುದಾಯಗಳ ಮಕ್ಕಳಿಗೆ ಮಾಧ್ಯಮಿಕ ಹಂತದವರೆಗೆ ಶಿಕ್ಷಣವನ್ನು ನೀಡುವ ವಸತಿ ಶಾಲೆಗಳಾಗಿವೆ.
