ಉದಯವಾಹಿನಿ, ಕಾಬೂಲ್: ಅಫ್ಗಾನಿಸ್ತಾನ ಆಡಳಿತ 2021ರ ಆಗಸ್ಟ್‌ನಲ್ಲಿ ತಾಲಿಬಾನ್ ವಶವಾದ ಬಳಿಕ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಆತಂಕ ಎದುರಾಗಿತ್ತು. ಅದು ಎರಡೇ ವರ್ಷಗಳಲ್ಲಿ ನಿಜವಾಗಿದೆ ಎಂದು ಯುಎಸ್ ಮೂಲಕ ಮಾಧ್ಯಮ ಸಂಸ್ಥೆ ಆರ್‌ಎಫ್‌ಇ/ಆರ್‌ಎಲ್ ವರದಿ ಮಾಡಿದೆ.
ತಾಲಿಬಾನ್ ಆಡಳಿತಾವಧಿಯಲ್ಲಿ ಯಹೂದಿಗಳು ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ಬಳಿಕ, ಹಿಂದೂ ಮತ್ತು ಸಿಖ್ ಸಮುದಾಯದವರ ಸಂಖ್ಯೆಯೂ ಕ್ಷೀಣಿಸಿದೆ ಎಂದು ಅದು ಹೇಳಿದೆ. ತಾಲಿಬಾನ್ ಆಡಳಿತದಲ್ಲಿ ಸಿಖ್ ಮತ್ತು ಹಿಂದೂ ಸಮುದಾಯದವರ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಸಾರ್ವಜನಿಕವಾಗಿ ತಮ್ಮ ಧಾರ್ಮಿಕ ದಿನಗಳನ್ನು ಆಚರಿಸದಂತೆ ನಿರ್ಬಂಧಿಸಲಾಗಿದೆ ಎಂದು ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ.
ಕಾಬೂಲ್‌ನಲ್ಲಿರುವ ಸಿಖ್ ಸಮುದಾಯದ ಫರಿ ಕೌರ್ ಎಂಬುವವರು, ಮಹಿಳೆಯರು ಬುರ್ಖಾ ಧರಿಸಲೇಬೇಕು ಎಂದು ತಾಲಿಬಾನ್ ಹೊರಡಿಸಿರುವ ಆದೇಶವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ‘ಮುಕ್ತವಾಗಿ ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಹೊರಗೆ ಹೋಗಬೇಕಿದ್ದರೆ, ಸಿಖ್ ವ್ಯಕ್ತಿ ಎಂಬುದು ಗೊತ್ತಾಗದಂತೆ ಮುಸ್ಲಿಮರ ಹಾಗೆ ಬಟ್ಟೆ ಧರಿಸಬೇಕಿದೆ’ ಎಂದು ಅವರು ಹೇಳಿರುವುದಾಗಿ ಉಲ್ಲೇಖಿಸಿದೆ.ಜಲಾಲ್‌ಬಾದ್ ನಗರದಲ್ಲಿ ಸಿಖ್ ಮತ್ತು ಹಿಂದೂಗಳನ್ನು ಗುರಿಯಾಗಿಸಿ 2018ರಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕೌರ್ ಅವರ ತಂದೆ ಮೃತಪಟ್ಟಿದ್ದಾರೆ. ಈ ದಾಳಿಯ ಬಳಿಕ ಕೌರ್ ಅವರ ತಾಯಿ ಮತ್ತು ಸಹೋದರಿಯೂ ಸೇರಿದಂತೆ ಸಿಖ್ ಸಮುದಾಯದ 1,500ಕ್ಕೂ ಅಧಿಕ ಮಂದಿ ಅಫ್ಗಾನಿಸ್ತಾನ ತೊರೆದಿದ್ದಾರೆ. ಆದರೆ, ಕೌರ್ ತಮ್ಮ ತಂದೆಯ ಆಸೆಯಂತೆ ಶಿಕ್ಷಣ ಪೂರ್ಣಗೊಳಿಸುವ ಸಲುವಾಗಿ ಕಾಬುಲ್‌ನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
