ಉದಯವಾಹಿನಿ, ವಿಜಯಪುರ : ಬೇಸಿಗೆ ಬಂದಿತೆಂದರೆ ರೈತರಿಗೆ ಅನಿಯಮಿತ ವಿದ್ಯುತ್ ಪೂರೈಕೆ, ಮೋಟರ್‌ಗಳು ಸುಟ್ಟು ಹೋಗುವುದು, ತ್ರೀಫೇಸ್ ವಿದ್ಯುತ್ ಇಲ್ಲದೇ, ಸಿಂಗಲ್ ಫೇಸ್ ವಿದ್ಯುತ್ ನೀಡುವುದು, ಹಗಲಿನಲ್ಲಿ ವಿದ್ಯುತ್ ನೀಡದೇ ರಾತ್ರಿ ಸಮಯದಲ್ಲಿ ವಿದ್ಯುತ್ ನೀಡುವುದರಿಂದ ಹಲವು ರೈತರು ರಾತ್ರಿ ತೋಟಗಳಲ್ಲಿ ಹಾವು ಮತ್ತಿತರೆ ವಿಷ ಜಂತುಗಳಿಂದ ಕಡಿಸಿಕೊಂಡು, ಪ್ರಾಣ ಹಾನಿಯಾಗುವುದು ಮುಂತಾದ ರೈತರ ಹತ್ತು-ಹಲವು ವಿದ್ಯುತ್ ಸಮಸ್ಯೆಗಳಿಗೆ ಸೌರಫಲಕ ಮೂಲಕ ವಿದ್ಯುತ್ ಪಡೆಯುವುದು ಪರ್ಯಾಯವಾಗಿದ್ದು, ಈಗಾಗಲೇ ವೆಂಕಟೇನಹಳ್ಳಿಯ ರೈತ ವಿಜಯ್ ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ.
ಇದುವರೆವಿಗೂ ರೈತರು ೧೨೦೦ ಅಡಿಯಿಂದ ೧೫೦೦ ಅಡಿಯವರೆಗೂ ಕೊಳವೆ ಬಾವಿ ಕೊರೆದರೂ, ಅಂತರ್ಜಲ ದೊರೆಯುತ್ತಿರಲಿಲ್ಲ. ಆದರೆ ಇದೀಗ ಎಚ್.ಎನ್.ವ್ಯಾಲಿ ನೀರಿನಿಂದ ಕೆರೆಗಳಿಗೆ ನೀರು ಹರಿಸುವುದರಿಂದ ವಿಜಯಪುರ ಸುತ್ತ-ಮುತ್ತಲ ಎಲ್ಲಾ ಹಳ್ಳಿಗಳಲ್ಲಿಯೂ ಅಂತರ್ಜಲ ಮಟ್ಟ ಏರಿ, ನೀರಿನ ಸಮಸ್ಯೆ ಇಲ್ಲವಾಗಿದ್ದು, ಆದರೆ ವಿದ್ಯುತ್ ಸಮಸ್ಯೆ ಮಾತ್ರ ವಿಪರೀತ ಕಾಡುತ್ತಿದ್ದು, ಇದೀಗ ಸರಕಾರ ಹಾಗೂ ಬ್ಯಾಂಕ್‌ಗಳು ಸಬ್ಸೀಡಿಯೊಂದಿಗೆ ರೈತರಿಗೆ ಸಾಲ ನೀಡಿದಲ್ಲಿ ಸೌರಫಲಕದ ವಿದ್ಯುತ್ ಅಳವಡಿಸಿಕೊಂಡು, ರೈತ ಉತ್ತಮ ಬೆಳೆಗಳನ್ನು ಬೆಳೆಯುವುದರೊಂದಿಗೆ ಆರ್ಥಿಕವಾಗಿಯೂ ಸದೃಢನಾಗಲು ಸಾಧ್ಯವಾಗುತ್ತದೆ.
ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಗೆ ಪರ್ಯಾಯವಾಗಿ ಸೌರಫಲಕಗಳು ಅಳವಡಿಸಿಕೊಳ್ಳಲು ಸಹಾಯಧನ ಬಿಡುಗಡೆ ಮಾಡುವಂತಹ ಯೋಜನೆಯನ್ನು ಜಾರಿಗೆ ತಂದರೆ, ವಿದ್ಯುತ್ ಉಳಿತಾಯದ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಲು ಸಹಕಾರಿಯಾಗುತ್ತದೆ ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿದ್ಯುತ್ ಶಕ್ತಿಯ ಮೇಲೆ ಅವಲಂಬಿತರಾಗದೆ, ಸೌರವಿದ್ಯುತ್ ಬಳಕೆ ಮಾಡಿಕೊಳ್ಳುವ ಮೂಲಕ ಮೂರು ವರ್ಷದಿಂದ ಕೊಳವೆಬಾವಿಯ ಮೂಲಕ ನೀರು ಹಾಯಿಸಿಕೊಂಡು ತೋಟಗಾರಿಕೆ ಮಾಡುತ್ತಿರುವ ರೈತ ವಿಜಯ್ ರೈತರಿಗೆ ಮಾದರಿಯಾಗಿದ್ದಾರೆ.
