ಉದಯವಾಹನಿ, ನವದೆಹಲಿ: ಪ್ರವಾಸೋದ್ಯಮ ಕ್ಷೇತ್ರವು 2030ರ ವೇಳೆಗೆ ಭಾರತದ ಆರ್ಥಿಕತೆಗೆ ₹20 ಲಕ್ಷ ಕೋಟಿಗೂ ಹೆಚ್ಚು ಕೊಡುಗೆ ನೀಡುವ ಸಾಧ್ಯತೆಯಿದ್ದು, ಈ ಕ್ಷೇತ್ರದಲ್ಲಿ ಯುವಕರಿಗೆ 13- 14 ಕೋಟಿ ಹೊಸ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರೋಜ್‌ಗಾರ್ ಯೋಜನೆಯಡಿ ವಿವಿಧ ಉದ್ಯೋಗಗಳಿಗೆ ಹೊಸದಾಗಿ ನೇಮಕವಾಗಿರುವ ಸುಮಾರು 51 ಸಾವಿರ ಮಂದಿಗೆ ಇಂದು ನೇಮಕಾತಿ ಪತ್ರ ವಿತರಿಸಿದ ಬಳಿಕ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಯುವಕರು ದೇಶ ಸೇವೆ ಮಾಡುವ ಹಂಬಲ ಹೊಂದಿದ್ದಾರೆ. ಇಂದು ನೇಮಕಾತಿ ಪತ್ರ ಪಡೆದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಅಮೃತ ಕಾಲದಲ್ಲಿ ನಾನು ಅವರನ್ನು ಭಾರತದ ಜನರ ‘ಅಮೃತ ರಕ್ಷಕರು’ ಎಂದು ಕರೆಯುತ್ತೇನೆ ಎಂದು ಮೋದಿ ಕೊಂಡಾಡಿದ್ದಾರೆ.
ಮೇಡ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಹೊಸ ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳ ಖರೀದಿಯತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ (ದೇಶೀಯ) ಉತ್ಪಾದನೆ ಹೆಚ್ಚಿಸುವುದರ ಜತೆಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಈ ದಶಕದಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ನಾನು ಈ ಭರವಸೆ ನೀಡುವ ಮೂಲಕ ನೀಡಿದ ಭರವಸೆಗಳನ್ನು ಸಂಪೂರ್ಣ ಜವಾಬ್ದಾರಿಯಿಂದ ಈಡೇರಿಸುತ್ತೇನೆ ಎಂದಿದ್ದಾರೆ.
