ಉದಯವಾಹನಿ, ತಿರುಪತಿ: ಆಂಧ್ರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರ ತಿರುಪತಿ ತಿರುಮಲದ ಪಾದಯಾತ್ರೆ ವೇಳೆ ದಾಳಿ ಮಾಡಿ ಬಾಲಕಿಯನ್ನು ಕೊಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಸೋಮವಾರ ಬೆಳಗಿನ ಜಾವ ತಿರುಮಲದಲ್ಲಿ 4ನೇ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ಧಾರೆ.
ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆಯನ್ನು ಆಂಜನೇಯ ಸ್ವಾಮಿ ವಿಗ್ರಹವಿರುವ ಏಳನೇ ಮೈಲಿ ಬಳಿ ಹಿಡಿಯಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಬಳಿಕ, ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶ್ರೀ ವೆಂಕಟೇಶ್ವರ ಮೃಗಾಲಯಕ್ಕೆ (ತಿರುಪತಿ ಮೃಗಾಲಯ) ಸ್ಥಳಾಂತರಿಸಿದೆ.’ಈ ಚಿರತೆಯನ್ನು ಆಗಸ್ಟ್ 17ರಿಂದ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಆಗಿನಿಂದ ತಪ್ಪಿಸಿಕೊಳ್ಳುತ್ತಿತ್ತು. ಬೋನಿನ ಬಳಿಗೆ ಬರುತ್ತಿದ್ದ ಚಿರತೆ ಈ ಮೊದಲು ಬೋನಿಗೆ ಬಿದ್ದಿದ್ದ ಚಿರತೆಗಳನ್ನು ನೋಡಿ ಓಡಿಹೋಗುತ್ತಿತ್ತು. ಹಾಗಾಗಿ, ಬೇರೆ ಮಾರ್ಗಗಳನ್ನು ಅನುಸರಿಸಿ ಸೆರೆ ಹಿಡಿದಿದ್ದೇವೆ’ ಎಂದು ತಿರುಪತಿ ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಎ ಶ್ರೀನಿವಾಸುಲು ತಿಳಿಸಿದರು.
