ಉದಯವಾಹಿನಿ, ಬೆಂಗಳೂರು: ಸಾಹಿತಿಗಳಿಗೆ ಜೀವ ಬೆದರಿಕೆಯೊಡ್ಡಿ ಬರೆದಿದ್ದ ಪತ್ರದ ಕುರಿತ ತನಿಖೆಯಲ್ಲಿ ಕುತೂಹಲಕಾರಕ ಮಾಹಿತಿಗಳು ಬೆಳಕಿಗೆ ಬಂದಿದ್ದು, ಒಬ್ಬ ವ್ಯಕ್ತಿಯೇ ಏಳು ಮಂದಿಗೆ ಪತ್ರ ಬರೆದಿರುವ ಮಾಹಿತಿ ತಿಳಿದುಬಂದಿದೆ. ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಪತ್ರದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಕೈ ಬರವಣಿಗೆಗಳನ್ನು ಪರಿಶೀಲಿಸಿದಾಗ ಒಬ್ಬನೇ ವ್ಯಕ್ತಿ 7 ಮಂದಿ ಸಾಹಿತಿಗಳಿಗೆ ಪತ್ರ ಬರೆದಿರುವುದು ಖಚಿತವಾಗಿದೆ.
ಈ ವ್ಯಕ್ತಿಯ ಮೂಲ ದಾವಣಗೆರೆ ಎಂದು ಹೇಳಲಾಗುತ್ತಿದೆ. ಆರೋಪಿ ತಾನು ತಪ್ಪಿಸಿಕೊಳ್ಳಲು ಪತ್ರಗಳನ್ನು ಬೇರೆ ಬೇರೆ ಜಿಲ್ಲೆಯ ತಾಲೂಕು ಹಾಗೂ ಗ್ರಾಮೀಣ ಭಾಗಗಳಿಂದ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈಗಾಗಲೇ ಸಾಕಷ್ಟು ಮಾಹಿತಿ ಕಲೆ ಹಾಕಲಾಗಿದ್ದು, ಶೀಘ್ರವೇ ಆರೋಪಿಯನ್ನು ದಸ್ತಗಿರಿ ಮಾಡುವ ವಿಶ್ವಾಸವನ್ನು ಪೋಲೀಸರು ವ್ಯಕ್ತಪಡಿಸಿದ್ದಾರೆ.ರಾಜ್ಯದ ಕೆ.ಮರುಳಸಿದ್ದಪ್ಪ, ಕುಂ. ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಸಾಹಿತಿಗಳಿಗೆ ಜೀವ ಬೆದರಿಕೆಯ ಪತ್ರಗಳು ಬಂದಿದ್ದವು. ಕೋಮು ರಾಜಕಾರಣದ ವಿರುದ್ಧ ಮಾತನಾಡಿದಾಗಲೆಲ್ಲಾ ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಪತ್ರಗಳು ಬರುತ್ತಿವೆ ಎಂದು ಇತ್ತೀಚೆಗೆ ಕೆ.ಮರುಳಸಿದ್ದಪ್ಪ ಹೇಳಿಕೆ ನೀಡಿದ್ದರು.ಗೃಹಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಸಾಹಿತಿಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಜೊತೆಗೆ ಸಾಹಿತಿಗಳಿಗೆ ಭದ್ರತೆ ಒದಗಿಸಲಾಗಿದೆ.
