ಉದಯವಾಹಿನಿ, ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಕಲಾವಿದರು ಮತ್ತು ಲೇಖಕರ ಪರವಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಫೋನ್ ಮಾಡಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡುವಂತೆ ಆಹ್ವಾನ ನೀಡಿದ್ದಾರೆ. ಇದು ಕಲಾವಿದರು ಮತ್ತು ಲೇಖಕರಿಗೆ ಸಂದ ಗೌರವ ಎಂದು ಪರಿಗಣಿಸಿ ಒಪ್ಪಿಗೆ ಸೂಚಿಸಿದ್ದೇನೆ ಎಂದರು.
ಮೈಸೂರು ದಸರಾ ಎಂದ ಕೂಡಲೇ ವಿಜಯನಗರದ ವೈಭವದಿಂದ ಆರಂಭಿಸಿ ನಾಡಿನ ಶ್ರೀಮಂತ ಪರಂಪರೆ ನಮ್ಮ ಕಣ್ಮುಂದೆ ಬರುತ್ತದೆ. ಆದರೆ ವಿಜಯನಗರ ಸಾಮ್ರಾಜ್ಯದ ಬಗ್ಗೆ ದಕ್ಷಿಣ ಭಾರತದ ಇತಿಹಾಸದ ಬಗ್ಗೆ ಒಂದು ಗ್ರಂಥವೇ ಬರೆಯಬಹುದು ಎಂದು ಹೇಳಿದರು. ನಮ್ಮಲ್ಲಿ ಒಕ್ಕೂಟ ವ್ಯವಸ್ಥೆ ರಚನೆಗೂ ಮೊದಲು, ಸಂವಿಧಾನದ ಕಲ್ಪನೆಗೂ ಮೊದಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಜಾ ಪ್ರತಿನಿಧಿ ಎಂಬ ಯೋಜನೆಯನ್ನು ರೂಪಿಸಿ ಕೃಷಿಕರಿಗೆ, ಕಾರ್ಮಿಕರಿಗೆ, ಎಲ್ಲ ವರ್ಗದ ಪ್ರತಿನಿಗಳನ್ನು ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಅರಮನೆಗೆ ಕರೆದು ಚರ್ಚಿಸುತ್ತಿದ್ದರು. ಇದೇ ಮುಂದೆ ಸಂವಿಧಾನ ರಚನೆಗೆ ಸಹಕಾರಿಯಾಯಿತು ಎಂದು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!