ಉದಯವಾಹಿನಿ, ಮಾಸ್ಕೋ : ರಷ್ಯಾ ಮೇಲೆ ಉಕ್ರೇನ್ ಇದೀಗ ಮತ್ತಷ್ಟು ಭೀಕರ ರೀತಿಯಲ್ಲಿ ದಾಳಿ ಆರಂಭಿಸಿದೆ. ರಷ್ಯಾದ ವಾಯುವ್ಯ ನಗರದ ಪ್ಸ್ಕೋವ್‌ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿಯ ಪರಿಣಾಮ ಎರಡು ಮಿಲಿಟರಿ ಸಾರಿಗೆ ವಿಮಾನಗಳು ಹಾನಿಗೊಂಡಿವೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇಲ್ಯುಶಿನ್ ೭೬ ಎಂಬ ಹೆಸರಿನ ಎರಡು ಸಾರಿಗೆ ವಿಮಾನಗಳು ದಾಳಿಯಲ್ಲಿ ಹಾನಿಗೊಂಡಿದೆ ಎನ್ನಲಾಗಿದೆ. ಆರಂಭದಲ್ಲಿ ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಸ್ಥಳೀಯ ಗವರ್ನರ್ ತಿಳಿಸಿದ್ದು, ಅಲ್ಲದೆ ದಾಳಿಯ ವಿಡಿಯೋಗಳನ್ನು ಕೂಡ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಎರಡು ವಿಮಾನಗಳು ಹೊತ್ತಿ ಉರಿಯುತ್ತಿರುವ ದೃಶ್ಯಗಳು ಕಂಡುಬಂದಿದೆ. ಆದರೆ ದಾಳಿಯ ಬಗ್ಗೆ ಉಕ್ರೇನ್ ಯಾವುದೇ ಅಧಿಕೃತ ಹೇಳಿಲ್ಲ. ಸಾಮಾನ್ಯವಾಗಿ ರಷ್ಯಾದಲ್ಲಿ ನಡೆಯುವ ದಾಳಿಯ ಬಗ್ಗೆ ಉಕ್ರೇನ್ ಯಾವುದೇ ಹೇಳಿಕೆ ನೀಡುವುದಿಲ್ಲ. ಸದ್ಯ ಪ್ಸ್ಕೋವ್‌ನ ಮೇಲೆ ನಡೆದ ಡ್ರೋನ್ ದಾಳಿಯ ಬಗ್ಗೆ ಕೂಡ ಉಕ್ರೇನ್ ಹೇಳಿಕೆ ನೀಡಿಲ್ಲ.
