ಉದಯವಾಹಿನಿ, ಲಂಡನ್: ಭಾರತೀಯ ಮೂಲದ ಮಹಿಳಾ ಗೂಢಚಾರಿಕೆಯ ಭಾವಚಿತ್ರವನ್ನು ಅನಾವರಣಗೊಳಿಸಿದ ಬ್ರಿಟನ್ ರಾಣಿ
ಬ್ರಿಟನ್‌ನ ರಾಣಿ ಕ್ಯಾಮಿಲ್ಲಾ ಅವರು ಟಿಪ್ಪು ಸುಲ್ತಾನ್‌ನ ವಂಶಸ್ಥ ಮತ್ತು ಭಾರತೀಯ ಮೂಲದ ಬ್ರಿಟನ್‌ನ ಮಾಜಿ ಗೂಢಚಾರಿ ನೂರ್ ಇನಾಯತ್ ಖಾನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ರಾಯಲ್ ಏರ್ ಫೋರ್ಸ್ ಕ್ಲಬ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ರಿಟನ್ ರಾಣಿ ನೂರ್ ಇನಾಯತ್ ಖಾನ್ ಅವರು ಬ್ರಿಟನ್‌ಗೆ ಸಲ್ಲಿಸಿದ ಸೇವೆಗೆ ಗೌರವ ಸಲ್ಲಿಸಿದರು. ರಾಯಲ್ ಏರ್ ಫೋರ್ಸ್ ಕ್ಲಬ್‌ನಲ್ಲಿರುವ ಕೋಣೆಗೆ ಇನಾಯತ್ ಖಾನ್ ಹೆಸರಿಡಲಾಗಿದೆ.
ಈ ಸಂದರ್ಭದಲ್ಲಿ ಇನಾಯತ್ ಖಾನ್ ಅವರ ಜೀವನಚರಿತ್ರೆ ಪುಸ್ತಕವನ್ನು ಬ್ರಿಟನ್ ರಾಣಿಗೆ ಭಾರತದ ಖ್ಯಾತ ಲೇಖಕಿ ಶ್ರಬಾನಿ ಬಸು ಅವರು ನೀಡಿದರು. ಇನಾಯತ್ ಖಾನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅವರ ಜೀವನ ಚರಿತ್ರೆ ಬರೆಯಲು ಅವಕಾಶ ನೀಡಿರುವುದು ವಿಶೇಷ ಗೌರವ ಎಂದು ಏರ್ ಫೋರ್ಸ್ ಕ್ಲಬ್ ಹೇಳಿದೆ. ಇನಾಯತ್ ಖಾನ್ ಅವರು ಬ್ರಿಟಿಷ್ ವಾಯುಪಡೆಯ ಮಹಿಳಾ ವಿಭಾಗದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ತೀವ್ರ ಅಪಾಯದ ಸಮಯದಲ್ಲಿ ಆಕೆಯ ಅಪ್ರತಿಮ ಶೌರ್ಯಕ್ಕಾಗಿ ಬ್ರಿಟಿಷ್ ಸರ್ಕಾರದಿಂದ ಆಕೆಗೆ ಜಾರ್ಜ್ ಕ್ರಾಸ್ ನೀಡಲಾಯಿತು.
